
ನವದೆಹಲಿ(ಜು.20): ಹಿಂದು ದೇವರುಗಳನ್ನು ಮದ್ಯಕ್ಕೆ ಹೋಲಿಸಿ ಸಮಾಜವಾದಿ ಪಾರ್ಟಿ ಸಂಸದ ನರೇಶ್ ಅಗರ್'ಲ್ ಆಡಿದ ಕೆಲ ಮಾತುಗಳು ಬುಧವಾರ ರಾಜ್ಯಸಭೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಯಿತು. ಈ ಬಗ್ಗ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ಅವರ ಮಾತನ್ನು ಕಡತದಿಂದ ತೆಗೆದು ಹಾಕಲಾಯಿತು. ಜೊತೆಗೆ ಅಗರ್‌ವಾಲ್ ತಮ್ಮ ಮಾತಿನ ಕುರಿತು ಕ್ಷಮೆಯಾಚಿಸಿದ್ದಾರೆ.
ಗೋರಕ್ಷಣೆಯ ಹೆಸರಿನಲ್ಲಿ ಗೋಸಾಗಣೆ ಮಾಡುವವರನ್ನು ಬಡಿದು ಕೊಲ್ಲುವ ಕುರಿತು ಬುಧವಾರ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಮಾತನಾಡಿದ ಅಗರ್‌ವಾಲ್, ‘ನಾನು 1991ರ ರಾಮಜನ್ಮಭೂಮಿ ವಿವಾದದ ವೇಳೆ ಬಲಪಂಥೀಯ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದ್ದ ಶಾಲೆಗೆ ಹೋಗಿದ್ದೆ. ಶಾಲೆಯನ್ನೇ ಆಗ ಜೈಲಾಗಿ ಪರಿವರ್ತಿಸಲಾಗಿತ್ತು. ಆಗ ಶಾಲೆಯ ಗೋಡೆಯ ಮೇಲೆ ಹಿಂದು ದೇವರನ್ನು ಮದ್ಯಕ್ಕೆ ಹೋಲಿಸುವ ಬರಹಗಳನ್ನು ಬರೆಯಲಾಗಿತ್ತು. ಈ ಬರಹಗಳನ್ನು ಬರೆದವರು ನಿಮ್ಮವರು. ಈಗ ಅವರೇ ಧರ್ಮರಕ್ಷಕರಂತೆ ಪೋಸು ಕೊಡುತ್ತಿದ್ದಾರೆ’ ಎಂದು ಬಿಜೆಪಿ ಸದಸ್ಯರತ್ತ ಬೊಟ್ಟು ಮಾಡಿತೋರಿಸಿದರು.
‘ವಿಸ್ಕಿಯಲ್ಲಿ ವಿಷ್ಣು ಇದ್ದಾನೆ. ರಮ್‌ನಲ್ಲಿ ರಾಮ ಇದ್ದಾನೆ. ಜಿನ್‌ನಲ್ಲಿ ಜಾನಕಿ (ಸೀತೆ) ಇದ್ದಾಳೆ. ಕಂಟ್ರಿ ಸಾರಾಯಿಯಲ್ಲಿ ಹನುಮಂತನಿದ್ದಾನೆ. ಶ್ರೀರಾಮಚಂದ್ರ ಕೀ ಜೈ’ ಎಂಬ ಬರಹ ಅದಾಗಿತ್ತು’ ಎಂದು ಅಗರ್‌ವಾಲ್ ನುಡಿದರು.
ಅಗರ್‌ವಾಲ್‌ರ ಈ ಹೇಳಿಕೆಗಳಿಗೆ ಬಿಜೆಪಿ ಸದಸ್ಯರು ಎದ್ದು ನಿಂತು ಭಾರಿ ಪ್ರತಿಭಟನೆ ವ್ಯಕ್ತಪಡಿಸಿದರು. ಕೂಡಲೇ ಅಗರ್‌ವಾಲ್ ಈ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಸಿದರು. ಆಗ ಮಧ್ಯಪ್ರವೇಶಿದ ಉಪಸಭಾಪತಿ ಪಿ.ಜೆ. ಕುರಿಯನ್, ‘ಅಗರ್‌ವಾಲ್ ಈ ಹೇಳಕೆ ನೀಡಬಾರದಾಗಿತ್ತು. ಇವು ಅವಹೇಳನಕಾರಿ ಹೇಳಿಕೆಗಳಾಗಿದ್ದು, ಅವನ್ನು ಹಿಂಪಡೆಯಬೇಕು. ಜತೆಗೆ, ಪದಗಳನ್ನು ಕಡತದಿಂದ ತೆಗೆದು ಹಾಕಬೇಕು’ ಎಂದು ಸೂಚಿಸಿದರು.
ಬಳಿಕ ಅಗರ್‌ವಾಲ್ ಮಾತನಾಡಿ, ‘ನನ್ನ ಹೇಳಿಕೆಎಯಿಂದ ನೋವಾಗಿದ್ದರೆ ಅವನ್ನು ಹಿಂಪಡೆಯುವೆ’ ಎಂದರು. ಆದರೂ ಬಿಜೆಪಿ ಸದಸ್ಯರು ತೃಪ್ತರಾಗದೇ ವಾಗ್ದಾಳಿ ನಡೆಸತೊಡಗಿದ ಕಾರಣ 2 ಬಾರಿ ಕುರಿಯನ್ ಕಲಾಪ ಮುಂದೂಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.