ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೈತ್ರಿ ಒಕ್ಕೂಟ ರಚನೆ

By Web DeskFirst Published Jul 23, 2018, 7:39 AM IST
Highlights

ಮುಂಬರುವ ಲೋಕಸಭಾ ಚುನಾವಣೆಗಾಗಿ ಸಕಲ ಪಕ್ಷಗಳೂ ಕೂಡ ಸಿದ್ಧತೆಯನ್ನು ಆರಂಭಿಸಿವೆ. ಇದೀಗ ಕಾಂಗ್ರೆಸ್ ಈ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದು, ಬಿಜೆಪಿ ವಿರೋಧಿ ಒಕ್ಕೂಟ ರಚನೆಗೆ ಮುಂದಾಗಿದೆ. ಕಾಂಗ್ರೆಸ್ ವಿಪಕ್ಷಗಳೊಂದಿಗೆ ಸೇರಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸುವ ತಯಾರಿಯಲ್ಲಿದೆ. 

ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ  ಮುಂದಾಗಿದ್ದು, ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸಿದೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿಯೊಂದನ್ನು ರಚಿಸಲು ರಾಹುಲ್ ತೀರ್ಮಾನಿಸಿದ್ದು, ‘ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಸಲಹೆಯನ್ನು ಈ ಸಮಿತಿಯು ವರಿಷ್ಠರಿಗೆ ನೀಡಲಿದೆ’ ಎಂದು ತಿಳಿಸಿದ್ದಾರೆ.

ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ), ವಿವಿಧ ರಾಜ್ಯಗಳ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. 2019 ರ ಲೋಕಸಭೆ ಚುನಾವಣೆಯಲ್ಲಿ ಬಲವಾದ ಬಿಜೆಪಿ ವಿರೋಧಿ ಕೂಟ ರಚನೆಯಾಗಬೇಕಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷವೇ ನೇತೃತ್ವ ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಮಾತನಾಡಿದ 35 - 40 ಮುಖಂಡರು ಬಲವಾಗಿ ಒತ್ತಿ ಹೇಳಿದರು. ಅಲ್ಲದೆ, ಇದಕ್ಕೆ ರಾಹುಲ್ ಗಾಂಧಿ ಅವರ ನೇತೃತ್ವವೇ ಆಗಬೇಕು ಎಂದು ಆಗ್ರಹಿಸಿದರು.  

ಅಂಬಿಕಾ ಸೋನಿ ಮಾತನಾಡಿ, ‘ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದ್ದು, ಚುನಾವಣೆಯಲ್ಲಿ ಇದರ ನಾಯಕನೇ ವಿಪಕ್ಷಗಳ ಮುಖವಾಗಬೇಕು’ ಎಂದರು. ಇನ್ನು ಪಿ. ಚಿದಂಬರಂ ಮಾತನಾಡಿ, ‘12  ರಾಜ್ಯಗಳಲ್ಲಿ ಕಾಂಗ್ರೆಸ್ ಬಲಶಾಲಿ ಪಕ್ಷವಾಗಿದೆ. ಇತರ ಮಿತ್ರಪಕ್ಷಗಳ ನೆರವಿನಿಂದ  ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಹುದು’ ಎಂದರು. ಸಭೆಯ ಬಳಿಕ ಸಂಕ್ಷಿಪ್ತವಾಗಿ ಸುದ್ದಿಗಾರರ ಜತೆ ರಾಹುಲ್ ಮಾತನಾಡಿ, ‘ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದನ್ನು ತೀರ್ಮಾನಿಸುವ ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲಾಗುವುದು’ ಎಂದರು.

ಮತ ವ್ಯಾಪ್ತಿ ಹೆಚ್ಚಳ ಅಗತ್ಯ- ರಾಹುಲ್: ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ರಾಹುಲ್, ನಮ್ಮ ಪಕ್ಷದ ಮತದ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಪರ ಯಾರು ಮತ ಹಾಕಿದ್ದಾರೆ ಎಂಬುದನ್ನು ಎಲ್ಲ ಕ್ಷೇತ್ರಗಳಲ್ಲೂ ಹುಡು ಕಬೇಕು. ಅವರ ವಿಶ್ವಾಸವನ್ನು ಮತ್ತೆ ಗಳಿಸಲು ರಣತಂತ್ರ ರೂಪಿಸಬೇಕು ಎಂದು ಹೇಳಿದರು. ದಮನಿತರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ದನಿ ಎತ್ತಬೇಕು. ಕಾರ್ಯ ಕರ್ತರು ಪುಟಿದೇಳಬೇಕು ಎಂದೂ ಕರೆ ನೀಡಿದರು. 

click me!