‘ಮಹಾ ಜನಾದೇಶ’ ಇಲ್ಲ: ಬಿಜೆಪಿಗೆ ಶಿವಸೇನೆ ಚಾಟಿ| ಸಂಜಯ ರಾವುತ್ ಪ್ರಕಟಿಸಿದ ವ್ಯಂಗ್ಯಚಿತ್ರ, ‘ಸಾಮ್ನಾ’ದ ಮುಖಪುಟ| ‘ಹುಲಿ’ಯು ‘ಗಡಿಯಾರ’ ಧರಿಸಿದ ವ್ಯಂಗ್ಯಚಿತ್ರದ ಮೂಲಕವೂ ಟಾಂಗ್
ಮುಂಬೈ[ಅ.26]: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದರೂ, ಶಿವಸೇನೆಯು ಕೇಸರಿ ಪಕ್ಷದ ಜತೆಗಿನ ಗುದ್ದಾಟ ಮುಂದುವರಿಸಿದೆ. ‘ಮಹಾರಾಷ್ಟ್ರದಲ್ಲಿ ಬಂದಿದ್ದು ‘ಮಹಾ ಜನಾದೇಶ’ ಅಲ್ಲ. ಅಧಿಕಾರದ ಮದ ಏರಿದವರಿಗೆ ಜನ ‘ಕಪಾಳಮೋಕ್ಷ’ ಮಾಡಿದ್ದಾರೆ’ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಟೀಕಿಸಲಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 288 ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ‘ಮಹಾ ಜನಾದೇಶ’ ಯಾತ್ರೆ ಕೈಗೊಂಡಿದ್ದರು. ‘ಸಾಮ್ನಾ’ದ ಮುಖಪುಟದಲ್ಲಿ ಶುಕ್ರವಾರ ಇದಕ್ಕೆ ‘ಇದು ಮಹಾ ಜನಾದೇಶವಲ್ಲ’ ಎಂದು ಬರೆದು ಪರೋಕ್ಷ ‘ಟಾಂಗ್’ ನೀಡಲಾಗಿದೆ.
ಈ ನಡುವೆ, ಶಿವಸೇನೆ ಸಂಸದ ಸಂಜಯ ರಾವುತ್ ಅವರು ಕುತೂಹಲಕಾರಿ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಶಿವಸೇನೆಯ ಚಿಹ್ನೆಯಾದ ‘ಹುಲಿ’, ಎನ್‌ಸಿಪಿ ಚಿಹ್ನೆಯಾದ ‘ಗಡಿಯಾರ’ವನ್ನು ಕೊರಳು ಸರದ ರೀತಿ ಕಟ್ಟಿಕೊಂಡು ಬಿಜೆಪಿ ‘ಚಿಹ್ನೆ’ಯಾದ ಕಮಲವನ್ನು ಕಾಂಗ್ರೆಸ್ ಚಿಹ್ನೆಯಾದ ‘ಕೈ’ಯಲ್ಲಿ ಹಿಡಿದು ಮೂಸುತ್ತಿದೆ. ಇದರ ಕೆಳಗೆ ‘ತಪ್ಪಾಗಿ ತಿಳೀಬೇಡಿ. ದೀಪಾವಳಿ ಇದೆ’ ಎಂದು ಬರೆಯಲಾಗಿದೆ.
ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನವನ್ನು ಅರ್ಧ ಅವಧಿಗೆ ಹಂಚಿಕೊಳ್ಳಬೇಕು ಎಂಬ ತನ್ನ ಬೇಡಿಕೆಗೆ ಶಿವಸೇನೆ ಮಣಿಯದೇ ಹೋದರೆ ಎನ್‌ಸಿಪಿ-ಕಾಂಗ್ರೆಸ್ ಜತೆ ಶಿವಸೇನೆ ಸಖ್ಯ ಬೆಳೆಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಗುರುವಾರ ಇದೇ ಮಾತು ಹೇಳಿದ್ದರು. ಹೀಗಾಗಿ ‘ಹುಲಿ’ಯು ‘ಗಡಿಯಾರ’ ಧರಿಸಿದ ವ್ಯಂಗ್ಯಚಿತ್ರದ ಹಿಂದೆ ಶಿವಸೇನೆಯು ಬಿಜೆಪಿಗೆ ಪರೋಕ್ಷ ಎಚ್ಚರಿಕೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.