ಯೋಗಿ ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

By Suvarna Web DeskFirst Published Oct 21, 2017, 6:48 PM IST
Highlights

* ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತನ ಹೆಸರು ರಾಜೇಶ್ ಮಿಶ್ರಾ

* ಉತ್ತರಪ್ರದೇಶದ ಪೂರ್ವಭಾಗದಲ್ಲಿರುವ ಘಾಜಿಪುರದಲ್ಲಿ ಘಟನೆ

* ರಾಜೇಶ್ ರಕ್ಷಣೆಗೆ ಹೋದ ಆತನ ಸೋದರನಿಗೂ ಗುಂಡೇಟು

* ಮೂವರು ಹಂತಕರ ಪೈಕಿ ಇಬ್ಬರ ಸುಳಿವು ಪತ್ತೆ; ಶೀಘ್ರದಲ್ಲೇ ಬಂಧನ: ಪೊಲೀಸರ ಭರವಸೆ

ಲಕ್ನೋ(ಅ. 21): ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಹತ್ಯೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಉತ್ತರಪ್ರದೇಶದ ಪೂರ್ವಭಾಗದಲ್ಲಿರುವ ಘಾಜಿಪುರದಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದ ರಾಜೇಶ್ ಮಿಶ್ರಾ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಪತ್ರಕರ್ತನಾಗಿದ್ದನೆನ್ನಲಾಗಿದೆ. ಬೈಕ್'ನಲ್ಲಿ ಬಂದ ಮೂವರು ಹಂತಕರು ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಈ ಘಟನೆಯಲ್ಲಿ ರಾಜೇಶ್ ಮಿಶ್ರಾ ಸೋದರನೊಬ್ಬನಿಗೆ ಗಾಯವಾಗಿದೆ.

ಇನ್ನೂ ಕೂಡ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಹಂತಕರನ್ನು ಹಿಡಿಯಲಾಗುವುದು ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

Latest Videos

ಘಾಜಿಪುರದ ಬ್ರಹ್ಮನ್'ಪುರ ಚಟ್ಟಿ ಪ್ರದೇಶದಲ್ಲಿ ರಾಜೇಶ್ ಮಿಶ್ರಾ ಮತ್ತವನ ಸೋದರ ಅಮಿತೇಶ್ ಮಿಶ್ರಾ ಇಬ್ಬರೂ ತಮ್ಮ ಹಾರ್ಡ್'ವೇರ್ ಅಂಗಡಿ ಕುಳಿತಿರುತ್ತಾರೆ. ಈ ವೇಳೆ ಬೈಕ್'ನಲ್ಲಿ ಬಂದಿಳಿದ ಮೂವರು ಹಂತಕರಲ್ಲಿ ಒಬ್ಬಾತ ರಾಜೇಶ್ ಮಿಶ್ರಾನ ತಲೆಗೆ ಗುಂಡು ಹಾರಿಸುತ್ತಾನೆ. ಈ ವೇಳೆ, ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಆತನ ಸೋದರ ಅಮಿತೇಶ್'ನ ಹೊಟ್ಟೆಗೆ ಗುಂಡು ಹಾರಿಸಿ ಪರಾರಿಯಾಗುತ್ತಾರೆ.

ಸ್ಥಳೀಯರು ಕೂಡಲೇ ಇಬ್ಬರನ್ನೂ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ, ರಾಜೇಶ್ ಮಿಶ್ರಾ ಅದಾಗಲೇ ಸಾವನ್ನಪ್ಪಿರುತ್ತಾನೆ. ಗಂಭೀರವಾಗಿ ಗಾಯಗೊಂಡಿರುವ ಅಮಿತೇಶ್'ನನ್ನು ವಾರಾಣಸಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ವೇಳೆ, ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸಲಿಲ್ಲ ಎಂಬ ಸಿಟ್ಟಿನಲ್ಲಿ ಸ್ಥಳೀಯ ಜನರು ದಾಂಧಲೆ ನಡೆಸಿದ ಘಟನೆಯೂ ನಡೆದಿದೆ.

ಹತ್ಯೆಯಾದ ರಾಜೇಶ್ ಮಿಶ್ರಾ ದೈನಿಕ್ ಜಾಗ್ರಣ್ ಹಿಂದಿ ಪತ್ರಿಕೆಗೆ ಸ್ಟ್ರಿಂಜರ್ ಆಗಿ ಕೆಲಸ ಮಾಡುತ್ತಿದ್ದ. ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಈತ ಸಂಘದ ಚಟುವಟಿಕೆಯಲ್ಲಿ ಸಾಕಷ್ಟು ಪಾಲ್ಗೊಳ್ಳುತ್ತಿದ್ದನೆನ್ನಲಾಗಿದೆ.

click me!