ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ; ಇಬ್ಬರ ಬಂಧನ

By Suvarna Web DeskFirst Published Aug 15, 2017, 1:07 PM IST
Highlights

* RSS ಕಾರ್ಯಕರ್ತ ಶರತ್ ಹತ್ಯೆ ಪ್ರಕರಣ

* ಪೊಲೀಸರಿಂದ ಮೂವರು ಆರೋಪಿಗಳ ಬಂಧನ

* ಖಲೀಲ್ ಉಲ್ಲಾ, ಅಬ್ದುಲ್ ಶಾಫಿ ಬಂಧಿತರು

* ಜುಲೈ 4ರಂದು ಹತ್ಯೆಯಾಗಿದ್ದ ಶರತ್ ಮಡಿವಾಳ

* ಐಜಿಪಿ ಹರಿಶೇಖರನ್ ನೇತೃತ್ವದಲ್ಲಿ ಕಾರ್ಯಾಚರಣೆ

ಮಂಗಳೂರು(ಆ. 15): ಬಂಟ್ವಾಳದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಖಲೀಲ್ ಉಲ್ಲಾ(30) ಮತ್ತು ಅಬ್ದುಲ್ ಶಾಫಿ(36) ಬಂಧಿತ ಆರೋಪಿಗಳಾಗಿದ್ದಾರೆ. ಸುಧೀರ್ ರೆಡ್ಡಿ ನೇತೃತ್ವದಲ್ಲಿ 30 ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಇವರಿಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಘಿದೆ. ಇಲ್ಲಿಗೆ ಕೊಲೆಯಾದ 40 ದಿನಗಳ ನಂತರ ಆರೋಪಿಗಳ ಬಂಧನವಾದಂತಾಗಿದೆ.

ಹತ್ಯೆ ಪ್ರಕರಣದಲ್ಲಿ ಪಿಎಫ್'ಐ ಸಂಘಟನೆಯ ಕೈವಾಡ ಇರಬಹುದೆಂಬ ಪೊಲೀಸರ ಶಂಕೆ ನಿಜವಾಗುವಂತಿದೆ. ಬಂಧಿತರ ಪೈಕಿ ಖಲೀಲ್ ಉಲ್ಲಾ ಚಾಮರಾಜನಗರ ಜಿಲ್ಲೆ ಪಿಎಫ್ಐ ಅಧ್ಯಕ್ಷರಾಗಿರುವುದು ಈ ಅನುಮಾನವನ್ನು ಗಟ್ಟಿ ಮಾಡಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ಶಾಫಿ ಹಾಲಾಡಿಯ ಸಜಿಪಮುನ್ನೂರು ಗ್ರಾಮದ ನಿವಾಸಿ ಎನ್ನಲಾಗಿದೆ.

Latest Videos

ಜುಲೈ 4ರಂದು ಬಂಟ್ವಾಳದ ಬಿ.ಸಿ.ರೋಡ್'ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ತಮ್ಮ ಅಂಗಡಿಯ ಶಟರ್ ಮುಚ್ಚುವ ವೇಳೆ ಸುಮಾರು 6 ದುಷ್ಕರ್ಮಿಗಳು ಕತ್ತಿಯಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಅದಾಗಿ ಮೂರು ದಿನಗಳ ಬಳಿಕ ಶರತ್ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆ ಬಳಿಕ ಮಂಗಳೂರು, ಅದರಲ್ಲೂ ಬಂಟ್ವಾಳ ತಾಲೂಕು ಬಹಳ ಸೂಕ್ಷ್ಮ ಪರಿಸ್ಥಿತಿ ತಲುಪಿತ್ತು.

ಪ್ರಕರಣದ ತನಿಖೆಯ ಹೊಣೆ ಹೊತ್ತ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರು ಕೊಲೆಗಾರರ ಪತ್ತೆಗೆ ಸುಧೀರ್ ರೆಡ್ಡಿ ನೇತೃತ್ವದಲ್ಲಿ 30 ಅಧಿಕಾರಿಗಳ ತಂಡ ರಚಿಸಿದ್ದರು. ಇವರು ಶಿವಮೊಗ್ಗ, ಕಾರವಾರ, ಹಾಸನ, ಮಂಡ್ಯ, ಬೆಂಗಳೂರು, ಕೇರಳ, ಮಹಾರಾಷ್ಟ್ರ, ತಮಿಳುನಾಡಿಗೆ ಹೋಗಿ ತನಿಖೆ ನಡೆಸಿ ಈ ಇಬ್ಬರನ್ನು ಬಂಧಿಸಿದೆ. ಈ ಇಬ್ಬರ ವಿಚಾರಣೆಯಿಂದ ಇನ್ನಷ್ಟು ಆರೋಪಿಗಳ ಸುಳಿವು ಸಿಗಬಹುದೆಂಬ ವಿಶ್ವಾಸದಲ್ಲಿ ಪೊಲೀಸರಿದ್ದಾರೆ.

click me!