ಆರ್‌ಎಸ್‌ಎಸ್‌ನಿಂದಲೇ ಮದ್ರಸಾಗಳ ಆರಂಭ!

By Web DeskFirst Published May 22, 2019, 10:57 AM IST
Highlights

ಆರ್‌ಎಸ್‌ಎಸ್‌ನಿಂದಲೇ ಮದ್ರಸಾಗಳ ಆರಂಭ!| ಉತ್ತರಾಖಂಡದಲ್ಲಿ ಮದ್ರಸಾ ಸ್ಥಾಪನೆಗೆ ಸಿದ್ದತೆ| ಇಲ್ಲಿ ಕಲಿತ ವಿದ್ಯಾರ್ಥಿಗಳು ಮುಲ್ಲಾಗಳಿಗೆ ಸೀಮಿತವಲ್ಲ| ಇಂಜಿನಿಯರ್‌, ಡಾಕ್ಟರ್‌ ಸೇರಿ ಇನ್ನಿತರ ಕ್ಷೇತ್ರದಲ್ಲಿ ನೈಪುಣ್ಯತೆ

ಡೆಹ್ರಾಡೂನ್‌/ಹರಿದ್ವಾರ[ಮೇ.22]: ಮುಸ್ಲಿಂ ಧಾರ್ಮಿಕ ಸಂಘಟನೆಗಳು ಮದ್ರಸಾ ಆರಂಭಿಸುವುದು ಸಾಮಾನ್ಯ. ಆದರೆ ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ಘಟಕವಾದ ಮುಸ್ಲಿಂ ರಾಷ್ಟ್ರೀಯ ಮಂಚ್‌(ಎಂಆರ್‌ಎಂ) ಉತ್ತರಾಖಂಡ್‌ ರಾಜಧಾನಿ ಡೆಹ್ರಾಡೂನ್‌ನಲ್ಲಿ ಮದ್ರಸಾ ಸ್ಥಾಪನೆಗೆ ಸಿದ್ಧತೆ ಮಾಡಿಕೊಂಡಿದೆ.

ಸಾಮಾನ್ಯ ಮದ್ರಸಾಗಳಲ್ಲಿ ನೀಡುವ ಧಾರ್ಮಿಕ ಶಿಕ್ಷಣದ ಜೊತೆಜೊತೆಗೇ ಈ ಮದ್ರಸಾಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಅತ್ಯಾಧುನಿಕ ಶಿಕ್ಷಣವನ್ನೂ ನೀಡಲಾಗುವುದು. ಇದಕ್ಕಾಗಿ ಡೆಹ್ರಾಡೂನ್‌ನಲ್ಲಿ ಈಗಾಗಲೇ ಅಗತ್ಯಜಮೀನನ್ನು ಖರೀದಿಸಲಾಗಿದ್ದು, ಮುಂದಿನ 6 ತಿಂಗಳಲ್ಲಿ ಮದ್ರಸಾ ತಲೆ ಎತ್ತಲಿದೆ ಎಂದು ಎಂಆರ್‌ಎಂ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಂಆರ್‌ಎಂನ ರಾಷ್ಟ್ರೀಯ ಉಪ ಸಂಘಟನಾ ಪ್ರಧಾನ ಕಾರ್ಯದರ್ಶಿ ತುಷಾರ್‌ ಕಾಂತ್‌ ಹಿಂದೂಸ್ತಾನಿ, ‘ನಮ್ಮ ಮದ್ರಸಾಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕೇವಲ ಶೆರಿಯತ್‌ ಕೋರ್ಟ್‌ನ ಜಡ್ಜ್‌, ಧಾರ್ಮಿಕ ಗುರು, ಇಮಾಮ್‌ಗಳು, ಮುಲ್ಲಾಗಳಿಗೆಷ್ಟೇ ಸೀಮಿತವಾಗದೆ, ಪದವೀದರರು, ಇಂಜಿನಿಯರ್‌ಗಳು, ವೈದ್ಯರು, ವಿಜ್ಞಾನಿಗಳು ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ನೈಪುಣ್ಯತೆ ಸಾಧಿಸಲಿದ್ದಾರೆ,’ ಎಂದು ಹೇಳಿದರು.

ಉತ್ತರಪ್ರದೇಶದ ಮೊರಾದಾಬಾದ್‌, ಬುಲಂದ್‌ಶಹರ್‌, ಹಪೂರ್‌ ಹಾಗೂ ಮುಜಾಫ್ಫರ್‌ನಗರದಲ್ಲಿ ಎಂಆರ್‌ಎಂ ಈಗಾಗಲೇ 5 ಮದ್ರಸಾಗಳನ್ನು ಸ್ಥಾಪನೆ ಮಾಡಿದೆ.

click me!