'ಕೋಳಿಯೇ ಹುಟ್ಟಿಲ್ಲ, ಕಬಾಬ್‌ ಆಸೆ ಏಕೆ?'

By Web DeskFirst Published May 22, 2019, 10:07 AM IST
Highlights

ಬೇಗ್‌ಗೆ ಇಷ್ಟೊಂದು ಆತುರವೇಕೆ? ದಿನೇಶ್‌ ಚಾಟಿ| ಸಮೀಕ್ಷೆಗೇಕೆ ಈ ಪರಿ ಪ್ರತಿಕ್ರಿಯೆ ಎಂದ ಕೆಪಿಸಿಸಿ ಅಧ್ಯಕ್ಷ| ಉಪ್ಪು ತಿಂದವರು ನೀರು ಕುಡಿಯುತ್ತಾರೆ, ತಪ್ಪು ಮಾಡಿದರೆ ಶಿಕ್ಷೆ ಇದ್ದೇ ಇರುತ್ತೆ| ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಎಂದರೆ ಬೇಗ್‌ ಮಾತ್ರವೇ? ಎಲ್ಲ ಟಿಕೆಟ್‌ ಅವರಿಗೇ ಸೀಮಿತವೇ?

ಬೆಂಗಳೂರು[ಮೇ.22]: ‘ಇನ್ನೂ ಕೋಳಿಯೇ ಹುಟ್ಟಿಲ್ಲ. ಆಗಲೇ ರೋಷನ್‌ ಬೇಗ್‌ ಅವರು ಕಬಾಬ್‌ ತಿನ್ನಲು ಆತುರ ಪಡುತ್ತಿದ್ದಾರೆ. ಇಷ್ಟೊಂದು ಆತುರ ಅವರಿಗೆ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಬೇಗ್‌ ಅವರು ಪಕ್ಷದ ಬಗ್ಗೆ ಇಂತಹ ಕೀಳು ಹೇಳಿಕೆ ನೀಡಿದ್ದು ಸರಿಯಲ್ಲ. ಇಷ್ಟಕ್ಕೂ, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದರೆ, ಅದಕ್ಕೆ ಶಿಕ್ಷೆ ಇದ್ದೇ ಇರುತ್ತದೆ.’

ತಮ್ಮನ್ನು ಅಪ್ರಬುದ್ಧ ಎಂದು ಟೀಕಿಸಿದ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದ ರೋಷನ್‌ ಬೇಗ್‌ ಅವರ ಹೇಳಿಕೆಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿರುವ ಮಾರುತ್ತರವಿದು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಚುನಾವಣೋತ್ತರ ಸಮೀಕ್ಷೆಗೆ ಇಂತಹ ಪ್ರತಿಕ್ರಿಯೆ ಏಕೆ? ಇಷ್ಟೊಂದು ಆತುರವನ್ನು ಬೇಗ್‌ ಪಡುತ್ತಿರುವುದಾದರೂ ಏಕೆ? ಇನ್ನೂ ಕೋಳಿಯೇ ಹುಟ್ಟಿಲ್ಲ, ಆಗಲೇ ಅವರು ಕಬಾಬ್‌ ಬೇಯಿಸಿ ತಿನ್ನೋಕೆ ಹೊರಟಿದ್ದಾರೆ. ಮೇ 23ರ ಫಲಿತಾಂಶ ಬೇಗ್‌ ಅವರ ಎಲ್ಲಾ ಹೇಳಿಕೆಗಳಿಗೂ ಉತ್ತರ ಕೊಡುತ್ತದೆ ಎಂದು ವ್ಯಂಗ್ಯ ಮಾಡಿದರು.

ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಅಂದರೆ ಬೇಗ್‌ ಮಾತ್ರವೇನು? ಸಚಿವ ಸ್ಥಾನ, ಚುನಾವಣಾ ಟಿಕೆಟ್‌ ಎಲ್ಲವನ್ನೂ ಅವರೊಬ್ಬರಿಗೇ ನೀಡಬೇಕೇನು? ಅವರಿಗೆ ನೀಡದೇ ಬೇರೆ ಅಲ್ಪಸಂಖ್ಯಾತ ನಾಯಕರಿಗೆ ನೀಡಿದರೆ ಅದು ಆ ಸಮುದಾಯಕ್ಕೆ ಮಾಡಿದ ಮೋಸವೇನು ಎಂದು ಪ್ರಶ್ನಿಸಿದ ಅವರು, ಬೇಗ್‌ ಅವರು ಒಬ್ಬ ಪ್ರಬುದ್ಧ ರಾಜಕಾರಣಿ, ಹಿರಿಯ ನಾಯಕ. ಅಂತಹವರು ಇಂತಹ ಹೇಳಿಕೆ ನೀಡಿದ್ದು ಶೋಭೆ ತರುವಂತಹದ್ದಲ್ಲ. ಸ್ವಲ್ಪ ತಾಳ್ಮೆ ವಹಿಸಬೇಕಿತ್ತು. ಏನೇ ಮಾತನಾಡುವುದಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಬಹುದಿತ್ತು ಎಂದರು.

ರೋಷನ್‌ ಬೇಗ್‌ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ, ಆಯ್ತು ಅದು ಮುಗಿದ ಅಧ್ಯಾಯ ಅಂತ ಕೋಪಗೊಂಡ ದಿನೇಶ್‌ ಗುಂಡೂರಾವ್‌, ಎಲ್ಲರಿಗೂ ಅಸಮಾಧಾನ ಇರುತ್ತೆ. ಇಂತಹ ಹೇಳಿಕೆ ಒಳ್ಳೆಯ ಬೆಳವಣಿಗೆ ಅಲ್ಲ. ಪಕ್ಷದ ಹಿತದೃಷ್ಟಿಯಿಂದ ಏನು ತೀರ್ಮಾನ ಮಾಡಬೇಕೋ ಮಾಡ್ತೀವಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರ ವಿರುದ್ಧ ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಅಲ್ಲದೆ, ಇಂತಹ ಹೇಳಿಕೆ ನೀಡದಂತೆ ನಾವು ಯಾರನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆಂದು ರೋಷನ್‌ ಬೇಗ್‌ ಅವರಿಗೆ ಖುಷಿಯಾಯಿತೇನೋ ಗೊತ್ತಿಲ್ಲ . ಪಕ್ಷ ಅಂದರೆ ತಾಯಿ ಸಮಾನ ಎಂದು ನಾವೆಲ್ಲ ಅಂದುಕೊಂಡವರು. ಮಂತ್ರಿ ಆಗಬೇಕು. ಅಧಿಕಾರದ ಹಿಂದೆ ಹೋಗಬೇಕು ಅನ್ನುವ ಸಣ್ಣತನವನ್ನಂತೂ ನಾನು ಮಾಡಿಲ್ಲ. ನನ್ನ ಮೇಲೂ ವಾಗ್ದಾಳಿ ಮಾಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಣ್ಣತನದ ರಾಜಕೀಯ ನಾನು ಮಾಡಿದವನಲ್ಲ. ಪಕ್ಷಕ್ಕೆ ತೊಂದರೆ, ಮುಜುಗರ ಕೊಡುವ ಹೇಳಿಕೆಯನ್ನು ನಾನ್ಯಾವತ್ತೂ ಕೊಟ್ಟಿಲ್ಲ. ಕೊಡುವುದೂ ಇಲ್ಲ ಎಂದು ಅವರು ಹೇಳಿದರು.

ರೋಷನ್‌ ಬೇಗ್‌ರನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ವಿಶ್ವನಾಥ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಜೆಡಿಎಸ್‌ ರಾಜ್ಯಾಧ್ಯಕ್ಷರ ಹೇಳಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ನೋಡಿಕೊಳ್ತಾರೆ ಎಂದಷ್ಟೇ ಹೇಳಿದರು.

click me!