ಮಹಾ ಹಿಂಸಾಚಾರದ ಹಿಂದೆ ಆರೆಸ್ಸೆಸ್ ಕೈವಾಡ; ಮೋದಿ 'ಮೌನಿ ಬಾಬಾ' : ಖರ್ಗೆ ವಾಗ್ದಾಳಿ

By Suvarna Web DeskFirst Published Jan 3, 2018, 7:56 PM IST
Highlights
  • ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರಕ್ಕೆ ಆರೆಸ್ಸೆಸ್ ಕಾರಣ
  • ಪ್ರಧಾನಿ ಮೋದಿ ಮೌನವಾಗಿರುವುದಕ್ಕೆ, ಅವರನ್ನು 'ಮೌನಿ ಬಾಬಾ' ಎಂದು ಬಣ್ಣಿಸಿದ ಖರ್ಗೆ

ನವದೆಹಲಿ: ಆರೆಸ್ಸೆಸ್ ಸಮಾಜವನ್ನು ಜಾತಿಯ ಆಧಾರದಲ್ಲಿ ಒಡೆಯುತ್ತಿದೆ,  ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಜಾತಿ ಹಿಂಸಾಚಾರಕ್ಕೆ ಆರೆಸ್ಸೆಸ್ ಕಾರಣವೆಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಇಂತಹ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದಕ್ಕೆ, ಅವರನ್ನು 'ಮೌನಿ ಬಾಬಾ' ಎಂದು ಬಣ್ಣಿಸಿದ ಖರ್ಗೆ, ಪ್ರಧಾನಿ ಮಾತನಾಡಬೇಕೆಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಆರೆಸ್ಸೆಸ್ ಪ್ರೇರಿತ ಫ್ಯಾಸಿಸ್ಟ್ ಹಿಂದುತ್ವ ಶಕ್ತಿಗಳೇ ಕಾರಣವೆಂದು ಖರ್ಗೆ ಹೇಳಿದ್ದಾರೆ.

ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲಿ ದಲಿತರ ವಿರುದ್ಧ ಅನ್ಯಾಯ ನಡೆಯುತ್ತಿದೆ. ಕೊರೆಗಾಂವ್ ಭೀಮಾ ಹಿಂಸಾಚಾರದ ತನಿಖೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ದಲಿತರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಇಂದು ಮಹಾರಾಷ್ಟ್ರ ಬಂದ್'ಗೆ ಕರೆ ನೀಡಲಾಗಿತ್ತು. ಭೀಮಾ ಕೋರೆಗಾಂವ್ ವೇಳೆ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿ ಮಹಾರಾಷ್ಟ್ರದಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರಕರಣದ ಕುರಿತು ಸಿಐಡಿ ತನಿಖೆಯಾಗಬೇಕು ಎಂದು ಮಹಾ ಸಿಎಂ ದೇವೇಂದ್ರ ಫಡ್ನಾವೀಸ್ ಆದೇಶಿಸಿದ್ದಾರೆ.

ಪುಣೆಯ ಭೀಮಾ ಕೋರೆಗಾಂವ್​ನಲ್ಲಿ ಜಾತಿ ಹಿಂಸಾಚಾರದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.  ಕಲ್ಲುತೂರಾಟದಲ್ಲಿ ಓರ್ವ ಬಲಿಯಾಗಿದ್ದಾನೆ.

ಭೀಮಾ ಕೋರೆಗಾಂವ್‌ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್‌ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ್ದ ಸ್ಮರಣಾರ್ಥ ಜನವರಿ 1ರಂದು ವಿಜಯೋತ್ಸವ ಆಯೋಜಿಸಲಾಗಿತ್ತು.  ಈ ವೇಳೆ ಬಲಪಂಥೀಯ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತ್ತು.

1 ಜನವರಿ 1818ರಂದು ಭೀಮಾ ಕೋರೆಗಾಂವ್ ನಡೆದ ಕದನವು ಮೇಲ್ಜಾತಿಯವರ ವಿರುದ್ಧ ದಲಿತ-ಶೋಷಿತರ ವಿಜಯವಾಗಿತ್ತು ಎಂದು ದಲಿತ ಮುಖಂಡ ಹಾಗೂ ಚಿಂತಕರು ಅಭಿಪ್ರಾಯಪಡುತ್ತಾರೆ.

 

click me!