ಆರೆಸ್ಸೆಸ್‌ನಿಂದ ಸೈನಿಕ ಶಾಲೆ ಆರಂಭ| ಸೇನೆಯಲ್ಲಿ ಅಧಿಕಾರಿ ಹುದ್ದೆ ಸೇರಲು ಅಗತ್ಯತರಬೇತಿಯ ಉದ್ದೇಶ| ವಿದ್ಯಾ ಭಾರತಿಯ ಹೆಗಲಿಗೆ ಸೈನಿಕ ಶಾಲೆ ನಿರ್ವಹಣೆಯ ಹೊಣೆ| ಮೊದಲ ಬ್ಯಾಚ್‌ನಲ್ಲಿ 160 ವಿದ್ಯಾರ್ಥಿಗಳಿಗೆ ಅವಕಾಶ| ಉತ್ತರಪ್ರದೇಶದ ಶಿಖರ್‌ಪುರ ಗ್ರಾಮದಲ್ಲಿ ಮೊದಲ ಶಾಲೆ ಆರಂಭ
ನವದೆಹಲಿ[ಜು.30]: ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇರಲು ಅಗತ್ಯವಾದ ಅಂಶಗಳನ್ನು ಒಳಗೊಂಡ ಶಿಕ್ಷಣ ನೀಡುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು, ಇದೇ ಮೊದಲ ಬಾರಿಗೆ ದೇಶದಲ್ಲಿ ಸೈನಿಕ ಶಾಲೆಯೊಂದನ್ನು ತೆರೆಯಲು ನಿರ್ಧರಿಸಿದೆ.
ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ರಾಜೇಂದ್ರಸಿಂಗ್ ಅವರ ಹುಟ್ಟೂರಾದ ಉತ್ತರಪ್ರದೇಶದ ಶಿಖರ್‌ಪುರದಲ್ಲಿ 2020ರ ಏಪ್ರಿಲ್‌ನಿಂದ ಸೈನಿಕ ಶಾಲೆ ಆರಂಭವಾಗಲಿದೆ. 6ರಿಂದ 12ನೇ ತರಗತಿಯ ಶಿಕ್ಷಣ ಜೊತೆಗೆ, ವಿದ್ಯಾರ್ಥಿಗಳು ಸೇನಾಧಿಕಾರಿ ಹುದ್ದೆಗೆ ಸೇರಲು ಅಗತ್ಯವಾದ ಎಲ್ಲಾ ಶಿಕ್ಷಣವನ್ನು ಇಲ್ಲಿ ನೀಡಲಾಗುವುದು. ಮೊದಲ ಹಂತದಲ್ಲಿ 6ನೇ ತರಗತಿಗೆ 160 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದ್ದು, ಶಾಲೆ ನಡೆಸುವ ಹೊಣೆಯನ್ನು ದೇಶಾದ್ಯಂತ 20000ಕ್ಕೂ ಹೆಚ್ಚು ಶಾಲೆ ನಡೆಸುತ್ತಿರುವ ವಿದ್ಯಾಭಾರತಿ ಸಂಸ್ಥೆಗೆ ವಹಿಸಲಾಗಿದೆ. ಶಾಲೆಗೆ ರಾಜೇಂದ್ರ ಸಿಂಗ್ ಅಲಿಯಾಸ್ ರಾಜೂ ಬಯ್ಯಾ ಹೆಸರನ್ನೇ ಈ ಶಾಲೆಗಿಡಲಾಗುತ್ತಿದೆ.
ದೇಶದ ಸೇನೆಯಲ್ಲಿ ಅಧಿಕಾರಿ ವರ್ಗದ ಕೊರತೆ ಇದೆ. ಇದಕ್ಕೆ ಮೂಲ ಕಾರಣ ಅದಕ್ಕೆ ಅರ್ಹರಾದ ಅಭ್ಯರ್ಥಿಗಳು ಸಿಗದೇ ಇರುವುದು. ಈ ಕೊರತೆ ತುಂಬಲು ಶಾಲೆ ಆರಂಭಿಸಲಾಗುತ್ತಿದೆ. ಇದಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಬೇರೆಡೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ.