2000 ರೂ ನೋಟು ಹೊರ ಬರುತ್ತಿಲ್ಲ, ಎಟಿಎಂ ಬಾಗಿಲು ತೆಗಿದಿಲ್ಲ

By Suvarna Web DeskFirst Published Nov 11, 2016, 4:47 AM IST
Highlights

ಈ ಕಾರ್ಯ ನಿನ್ನೆಯಿಂದಲೇ ಆರಂಭವಾಗಿದೆಯಾದರೂ ಸಾಕಷ್ಟು ಪ್ರಮಾಣದಲ್ಲಿ ಎಟಿಎಂಗಳನ್ನು ತಾಂತ್ರಿಕವಾಗಿ ಸಿದ್ಧಪಡಿಸಿಲ್ಲ. ಹೀಗಾಗಿ ಇದಕ್ಕೆ ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು(ನ.11): 500 ಮತ್ತು 1000 ರು.ಗಳ ನೋಟ್ ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಬಳಿಕ ಶುಕ್ರವಾರದಿಂದ ಆರಂಭವಾಗಬೇಕಿದ್ದ ಎಟಿಎಂಗಳು ಇನ್ನೂ ಬಾಗಿಲು ತೆರೆದಿಲ್ಲ.

ಆರ್ ಬಿಐ ಸೂಚನೆ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ಇಂದಿನಿಂದ ಎಟಿಎಂಗಳು ಕಾರ್ಯನಿರ್ವಹಿಸಬೇಕಿದೆಯಾದರೂ, ಸಾಕಷ್ಟು ಪ್ರಮಾಣದ ಹೊಸ ನೋಟುಗಳ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ  ಬಹುತೇಕ ಎಲ್ಲ ಎಟಿಎಂಗಳು ಬಾಗಿಲು ಹಾಕಿವೆ. ಈ ಹಿಂದೆ ಸುದ್ದಿ ಬಿತ್ತರವಾದಂತೆ ಎಟಿಎಂಗಳು ಕಾರ್ಯನಿರ್ವಹಿಸುತ್ತವೆ ಎಂದು ತಿಳಿದ ಸಾರ್ವಜನಿಕರು, ಬಾಗಿಲು ಹಾಕಿರುವ ಎಟಿಎಂಗಳ ಮುಂದೆಯೇ ಹಣಕ್ಕಾಗಿ ಸಾಲುಗಟ್ಟಿ  ನಿಂತಿದ್ದಾರೆ.

Latest Videos

ನಿನ್ನೆ ಮಧ್ಯರಾತ್ರಿಯಿಂದಲೇ ಎಟಿಎಂಗಳು ಕಾರ್ಯ ನಿರ್ವಹಿಸಬೇಕಿತ್ತಾದರೂ, ಹಣ ತುಂಬಿಸುವ ಪ್ರಕ್ರಿಯೆಲ್ಲಿ ವಿಳಂಬ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಈವರೆಗೂ ಎಟಿಎಂಗಳಲ್ಲಿ ಹಣ ತುಂಬಿಸಲಾಗಿಲ್ಲ. ನೂತನ 2000 ರು.  ನೋಟುಗಳನ್ನು ಎಟಿಎಂಗಳನ್ನು ತುಂಬಿಸಲು ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಈ ಸಮಸ್ಯೆ ಉಲ್ಬಣವಾಗಿದೆ. ಹೀಗಾಗಿ ಎಟಿಎಂಗಳಲ್ಲಿ ತಾಂತ್ರಿಕ ಸಮಸ್ಯೆ ಪರಿಹರಿಸಲು ಮತ್ತಷ್ಟು ಕಾಲಾವಕಾಶ ಬೇಕಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

ಹೊಸ ನೋಟುಗಳಿಗೆ ಸರಿಯಾಗಿ ಎಟಿಎಂ ಮೆಷಿನ್ ಅನ್ನು ಹೊಂದಿಸಬೇಕು
ಎಟಿಎಂ ಯಂತ್ರದಲ್ಲಿ ಹಣವನ್ನು ಶೇಖರಿಸಿಡುವ ಸ್ಥಳಕ್ಕೆ ಕ್ಯಾಸೆಟ್ ಎಂದು ಕರೆಯಲಾಗುತ್ತದೆ. ಈ ಕ್ಯಾಸೆಟ್ ಗಳನ್ನು ಇದೀಗ ಚಾಲ್ತಿಯಲ್ಲಿರುವ ನೂತನ ನೋಟಿನ ಅಳತೆಗೆ ಹೊಂದಿಸಬೇಕಾಗುತ್ತದೆ. ಈ ಹಿಂದೆ ಹಳೆಯ 500 ಮತ್ತು  1000 ನೋಟುಗಳ ಅಳತಗೆ ಈ ಕ್ಯಾಸೆಟ್ ಗಳನ್ನು ಹೊಂದಿಸಲಾಗಿತ್ತು.

ಆದರೆ ಪ್ರಸ್ತುತ ಈ ನೋಟುಗಳು ಅಮಾನ್ಯಗೊಂಡಿರುವುದರಿಂದ ನೂತನ ನೋಟುಗಳ ಅಳತೆಗೆ ಇವುಗಳನ್ನು ಹೊಂದಿಸಬೇಕಿದೆ. ಸಿಬ್ಬಂದಿಗೆ ಹೊಸ  ನೋಟುಗಳ ಲಭ್ಯತೆ ಇಲ್ಲದೆ ಬಹುತೇಕ ಎಟಿಎಂಗಳಲ್ಲಿ ಇಂದಿಗೂ ಕ್ಯಾಸೆಟ್ ಗಳನ್ನು ಹಳೆಯ ನೋಟುಗಳ ಅಳತೆಗೆ ಹೊಂದಿಸಲಾಗಿದೆ. ಹೀಗಾಗಿ ಹೋಸ ನೋಟುಗಳ ಅಳತೆಗೆ ಕ್ಯಾಸೆಟ್ ಗಳನ್ನು ಹೊಂದಿಸಲು ಪ್ರತಿಯೊಂದು  ಎಟಿಎಂ ಕೇಂದ್ರಗಳಿಗೆ ಎಂಜಿನಿಯರ್ ಗಳು ತೆರಳಿ ಅವುಗಳನ್ನು ನೂತನ ನೋಟಿನ ಅಳತೆಗೆ ಹೊಂದಿಸಬೇಕಿದೆ.

ಈ ಕಾರ್ಯ ನಿನ್ನೆಯಿಂದಲೇ ಆರಂಭವಾಗಿದೆಯಾದರೂ ಸಾಕಷ್ಟು ಪ್ರಮಾಣದಲ್ಲಿ ಎಟಿಎಂಗಳನ್ನು ತಾಂತ್ರಿಕವಾಗಿ ಸಿದ್ಧಪಡಿಸಿಲ್ಲ. ಹೀಗಾಗಿ ಇದಕ್ಕೆ ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

click me!