ಎಟಿಎಂ ಬಳಕೆದಾರರೇ ಎಚ್ಚರ : ನಿಮ್ಮ ಹಣದ ಮೇಲಿದೆ ಕಳ್ಳರ ಕಣ್ಣು

By Web DeskFirst Published Aug 4, 2018, 9:30 AM IST
Highlights

ಎಟಿಎಂ ಬಳಕೆದಾರರೇ ನೀವು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ನಿಮ್ಮ ಹಣಕ್ಕೂ ಕೂಡ ಬೀಳಬಹುದು ಕನ್ನ. ಆದ್ದರಿಂದ ಭದ್ರತಾ ಸಿಬ್ಬಂದಿ ಇರುವ ಎಟಿಎಂ ನಲ್ಲೇ  ನೀವು ಹಣ ಡ್ರಾ ಮಾಡಿದಲ್ಲಿ ನಿಮ್ಮ ಹಣವು ಸೇಫ್ ಆಗಿರಲಿದೆ. 

ಕೋಲ್ಕತಾ: ಭದ್ರತಾ ಸಿಬ್ಬಂದಿಯಿರುವ ಎಟಿಎಂಗಳಲ್ಲಿ ಮಾತ್ರವೇ ಗ್ರಾಹಕರು ಹಣ ವಿತ್‌ಡ್ರಾ ಮಾಡುವುದು ಒಳಿತು. ಇಲ್ಲದಿದ್ದರೆ, ನಿಮ್ಮ ಹಣ ಎಟಿಎಂ ವಂಚಕರ ಪಾಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೌದು, ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ತಂತ್ರ ಮೂಲಕ ಕೆನರಾ, ಪಂಜಾಬ್ ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕ್‌ಗಳ ಗ್ರಾಹಕರ ಹಣವನ್ನು ಲಪಟಾಯಿಸಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಬೆಳಕಿಗೆ ಬಂದಿದೆ. 

ಕೇವಲ ಐದೇ ದಿನಗಳಲ್ಲಿ 76 ಮಂದಿಯನ್ನು ವಂಚಿಸಿರುವ ಎಟಿಎಂ ವಂಚಕರು 20 ಲಕ್ಷ ರು.ಗೆ ಕನ್ನ ಹಾಕಿದ್ದಾರೆ.  ಎಟಿಎಂ ವಂಚಕರಿಂದ ವಂಚನೆಗೊಳಗಾದವರ ಸಂತ್ರಸ್ತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ರಾಷ್ಟ್ರಾದಾದ್ಯಂತ ತೀವ್ರ ಆತಂಕದ ವಾತಾವರಣವೇ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಈ ಸಂಬಂಧದ ತನಿಖೆಗಾಗಿ ಕೋಲ್ಕತಾ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿದ್ದು, ಎಟಿಎಂಗಳ ಸಿಸಿಟೀವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದೆ. 

ಆಗಿದ್ದೇನು?: ನಗರದ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಶಿನ್ ಅಳವಡಿಸುವ ಕೃತ್ಯದಲ್ಲಿ 5 ಮಂದಿರುವ ತಂಡವೊಂದು ಕೆಲವು ತಿಂಗಳು ಗಳಿಂದ ತೊಡಗಿತ್ತು ಎಂದು ವರದಿಯಾಗಿತ್ತು. ಈ ಸ್ಕಿಮ್ಮಿಂಗ್ ಮಶಿನ್‌ಗಳು ಎಟಿಎಂನಲ್ಲಿ ಬಳಸಲಾಗುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಪಾಸ್‌ ವರ್ಡ್‌ನಂಥ ರಹಸ್ಯ ಮಾಹಿತಿಯನ್ನು ತನ್ನಲ್ಲಿ ಶೇಖರಿಸಿಕೊಳ್ಳುತ್ತದೆ. 

ಬಳಿಕ ಈ ರಹಸ್ಯ ಮಾಹಿತಿ ಬಳಸಿಕೊಂಡಿರುವ ಎಟಿಎಂ ವಂಚಕರು, ಬೇರೆ ಬೇರೆ ನಗರಗಳ ಎಟಿಎಂಗಳ ಮೂಲಕ ಜನ ಸಾಮಾನ್ಯರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ತನಿಖಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಹಣವನ್ನು ಕಳೆದುಕೊಂಡಿರುವ ಗ್ರಾಹಕರು ಮತ್ತು ಇತರ ಗ್ರಾಹಕರು, ತಮ್ಮ ಹಣಕ್ಕೂ ಎಟಿಎಂ ವಂಚಕರು ಕನ್ನ ಹಾಕಿದ್ದಾರೆಯೇ ಎಂದು ತಿಳಿಯಲು ಬ್ಯಾಂಕ್‌ನ ಮುಂದೆ ಜಮಾಯಿಸಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯಕ್ತಿಯೋರ್ವ, ‘ಊಟ ಮಾಡುತ್ತಿರುವ ವೇಳೆ ನನ್ನ ಖಾತೆಯಿಂದ 20 ಸಾವಿರ ರು. ಕಡಿತವಾಗಿರುವ ಸಂದೇಶ ಬಂದಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೆ 20 ಸಾವಿರ ರು. ವಿತ್‌ಡ್ರಾ ಮಾಡಲಾಗಿದೆ ಎಂಬ ಸಂದೇಶ ಬಂತು,’ ಎಂದು ಆಘಾತ ವ್ಯಕ್ತಪಡಿಸಿದರು.

click me!