ವೈರಲ್ ಚೆಕ್ : ಕೇಂದ್ರದಿಂದ ಪ್ರತಿಯೊಬ್ಬರಿಗೂ 12 ಸಾವಿರ ರೂ ಉಚಿತ ಕೊಡುಗೆ?

By Web DeskFirst Published Sep 4, 2018, 11:17 AM IST
Highlights

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಪ್ರತಿಯೊಬ್ಬರಿಗೂ 12 ಸಾವಿರ ರೂ ಉಚಿತ | ಅರ್ಜಿ ಸಲ್ಲಿಸಲಿ ಸೆಪ್ಟೆಂಬರ್ 5 ಕೊನೆ ದಿನಾಂಕ | 

ಬೆಂಗಳೂರು (ಸೆ. 04): ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ನೋಂದಾಯಿಸಿ 12,000 ರುಪಾಯಿಯನ್ನು ಉಚಿತವಾಗಿ ಪಡೆಯಿರಿ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಒಟ್ಟಾರೆ ಸಂದೇಶದಲ್ಲಿ, ‘ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹೆಸರು ನೋಂದಾಯಿಸಿದ ಕುಟುಂಬಗಳಿಗೆ 12.000 ರೂ ವನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ. ಅರ್ಜಿ ಸಲ್ಲಿಸಲು ಇದೇ ಸೆಪ್ಟೆಂಬರ್ 5 ಕೊನೆಯ ದಿನಾಂಕ. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಮತ್ತು ಕುಟುಂಬದ ಸದಸ್ಯರ ಹೆಸರನ್ನು ನೋಂದಾಯಿಸಬಹುದು.

ದಯವಿಟ್ಟು ಈ ಸಂದೇಶವನ್ನು ನಿಮ್ಮೆಲ್ಲಾ ಸ್ನೇಹಿತರಿಗೆ ಕಳುಹಿಸಿ. ಬಡವರು ಈ ಯೋಜನೆಯ ಉಪಯೋಗ ಪಡೆಯಲಿ’ ಎಂದು ಹೇಳಲಾಗಿದೆ. ಸದ್ಯ ಈ ಸಂದೇಶ ವೈರಲ್ ಆಗಿದೆ. ಆದರೆ ಪ್ರಧಾನಿ ಮೋದಿ ನಿಜಕ್ಕೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರತಿಯೊಬ್ಬರಿಗೂ 12 ಸಾವಿರ ಉಚಿತವಾಗಿ ನೀಡುತ್ತಿದ್ದಾರೆಯೇ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ.

ವಾಸ್ತವವಾಗಿ ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ 12 ಸಾವಿರ ರು. ಸಿಗುವುದಿಲ್ಲ. ಬದಲಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಅನಗತ್ಯ ಕರೆಗಳು ಬರುತ್ತವೆ. ಹಾಗೇ ಈ ಸಂದೇಶವನ್ನು ಕನಿಷ್ಠ 10 ಗ್ರೂಪ್‌ಗಳಿಗೆ ಕಳುಹಿಸವಂತೆ ಕೇಳಲಾಗಿದೆ. ಹೀಗೆ ಪ್ರತಿಯೊಬ್ಬರೂ ಸಂದೇಶವನ್ನು ಶೇರ್ ಮಾಡುವುದರಿಂದ ಲಕ್ಷಾಂತರ ಜನರು ಈ ಲಿಂಕ್ ತೆರೆಯುತ್ತಾರೆ. ಇದರಿಂದ ನಕಲಿ ವೆಬ್‌ಸೈಟ್ ಮಾಲೀಕರು ಜಾಹೀರಾತುಗಳಿಂದ ಹಣ ಗಳಿಸುತ್ತಾರಷ್ಟೆ.

ಇನ್ನು ಈ ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಇದು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟೇ ಅಲ್ಲ. ಹಾಗಾಗಿ ಕೇಂದ್ರ ಸರ್ಕಾರ 12 ಸಾವಿರ ರು.ವನ್ನು ಉಚಿತವಾಗಿ ನೀಡುತ್ತಿದೆ ಎಂದು ವೈರಲ್ ಆಗಿರುವ ಸುದ್ದಿ ಸುಳ್ಳು. 

-ವೈರಲ್ ಚೆಕ್ 

click me!