ಮನ್ಸೂರ್ ನನ್ನು ನನ್ನ ಬಳಿ ಕರೆದುಕೊಂಡು ಬಂದು ಬೇಗ್ ಸಹಾಯ ಕೇಳಿದ್ರು : ಕೈ ನಾಯಕ

By Web DeskFirst Published Jun 18, 2019, 8:01 AM IST
Highlights

ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಬಗ್ಗೆ ಆರ್ ವಿ ದೇಶಪಾಂಡೆ ಹೊಸ ಬಾಂಬ್ ಸಿಡಿಸಿದ್ದಾರೆ. ಕಳೆದ ತಿಂಗಳು ಮನ್ಸೂರ್ ಜೊತೆ ನನ್ನ ಭೇಟಿ ಮಾಡಿ ಸಹಾಯ ಕೇಳಿದ್ದರು ಎಂದಿದ್ದಾರೆ.

ಬೆಂಗಳೂರು :  ಐಎಂಎ ಸಂಸ್ಥೆಯ ಮಾಲಿಕ ಮನ್ಸೂರ್‌ ಖಾನ್‌ನನ್ನು ಕಳೆದ ತಿಂಗಳು ಶಾಸಕ ರೋಷನ್‌ ಬೇಗ್‌ ಅವರು ನನ್ನ ಬಳಿಗೆ ಕರೆದುಕೊಂಡು ಬಂದು ಸಹಾಯ ಕೇಳಿದ್ದು ನಿಜ. ಕಾನೂನು ಚೌಕಟ್ಟಿನಲ್ಲಿದ್ದರೆ ನೋಡೋಣ ಎಂಬುದಾಗಿ ಹೇಳಿ ಕಳುಹಿಸಿದ್ದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಕೋಟ್ಯಂತರ ರು. ವಂಚನೆ ಮಾಡಿ ಪರಾರಿಯಾಗಿರುವ ಆರೋಪಿ ಮನ್ಸೂರ್‌ ಖಾನ್‌ ಅವರೊಂದಿಗೆ ಸಚಿವ ದೇಶಪಾಂಡೆ ಅವರನ್ನು ಭೇಟಿ ಮಾಡಿದ್ದ ರೋಷನ್‌ ಬೇಗ್‌ ಈ ಪ್ರಕರಣದಲ್ಲಿ ಮನ್ಸೂರ್‌ ಖಾನ್‌ ಪರವಾಗಿ ಲಾಬಿ ನಡೆಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಚಿವರು ಈ ಸ್ಪಷ್ಟನೆ ನೀಡಿದರು.

ಕಳೆದ ಮೇ ತಿಂಗಳು ಶಾಸಕ ರೋಷನ್‌ ಬೇಗ್‌ ಅವರು ಐಎಂಎ ಸಂಸ್ಥೆಯ ಮಾಲಿಕ ಮನ್ಸೂರ್‌ ಖಾನ್‌ನನ್ನು ಕರೆದುಕೊಂಡು ಬಂದರು. ಮನ್ಸೂರ್‌ನನ್ನು ನನಗೆ ಪರಿಚಯ ಮಾಡಿಸಿ, ಇವರು ನನ್ನ ಕ್ಷೇತ್ರದವರು. ಶಾಲೆಗಳನ್ನು ನಡೆಸುತ್ತಿದ್ದು, ಬ್ಯಾಂಕಿಂಗ್‌ ವ್ಯವಹಾರ ನಡೆಸುತ್ತಿದ್ದಾರೆ. ಭಾರತೀಯ ರಿಸವ್‌ರ್‍ ಬ್ಯಾಂಕ್‌ ಸೂಚನೆ ಮೇರೆಗೆ ಪೊಲೀಸರು ವಿಚಾರಣೆ ನಡೆಸಿ ಕಂದಾಯ ಇಲಾಖೆಗೆ ವರದಿ ನೀಡಬೇಕಾಗಿದೆ. ಪೊಲೀಸ್‌ ತನಿಖೆ ಬಳಿಕವೂ ಮನ್ಸೂರ್‌ಗೆ ಪರಿಹಾರ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದರು. ಅದಕ್ಕೆ ನಾನು ಇಂತಹ ಯಾವುದೇ ವರದಿ ನನಗೆ ಬಂದಿಲ್ಲ. ವರದಿ ಬಂದ ಬಳಿಕ ಪಾರದರ್ಶಕವಾಗಿ ಪರಿಶೀಲಿಸಿ ಕಾನೂನು ಪ್ರಕಾರವಿದ್ದರೆ ಮುಂದೆ ನೋಡೋಣ ಎಂದು ಹೇಳಿ ಕಳುಹಿಸಿದ್ದೆ ಎಂದರು.

ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ (ಕೆಪಿಐಡಿ) ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪೊಲೀಸರು ನನಗೆ ವರದಿ ಸಲ್ಲಿಸಬೇಕು. ಪೊಲೀಸ್‌ ಇಲಾಖೆಯು ಎರಡು ಬಾರಿ ವರದಿ ನೀಡಿದ್ದು, ಅದನ್ನು ಕಂದಾಯ ಇಲಾಖೆ ಒಪ್ಪಿಲ್ಲ. ಐಎಂಎ ಪ್ರಕರಣದಲ್ಲಿ ಕಂದಾಯ ಇಲಾಖೆಯು ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ಕೆಲಸ ಮಾಡಿದೆ ಎಂದು ಹೇಳಿದರು.

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಐಎಂಎ ವಿರುದ್ಧ ದೂರುಗಳಿದ್ದರೆ ನೀಡಬಹುದು ಎಂದು ಹೇಳಲಾಗಿತ್ತು. ಆದರೆ, ಯಾರೊಬ್ಬರೂ ದೂರು ನೀಡಿರಲಿಲ್ಲ. ಸಂಸ್ಥೆ ಬಗ್ಗೆ ಆರ್‌ಬಿಐ ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಆರ್‌ಬಿಐನ ನಿರ್ದೇಶನದಂತೆ ಪೊಲೀಸ್‌ ಇಲಾಖೆ ತನಿಖೆ ಕೈಗೊಂಡಿತ್ತು. 2019ರ ಏ.2ರಂದು ಆರ್‌ಬಿಐ ಮತ್ತೊಮ್ಮೆ ಪತ್ರ ಬರೆದು ಸಂಸ್ಥೆಯ ಆಸ್ತಿ ಬಗ್ಗೆ ನೀವು ಇನ್ನೂ ತನಿಖೆ ಕೈಗೊಂಡಿಲ್ಲ, ಬೇಗ ತನಿಖೆ ನಡೆಸಿ ಎಂದು ಪೊಲೀಸ್‌ ಇಲಾಖೆಗೆ ನೇರವಾಗಿ ತಿಳಿಸಿತು. ಅದರಂತೆ ತನಿಖೆ ಕೈಗೊಂಡ ಪೊಲೀಸರು ಇದು ಕೆಪಿಐಡಿ ಕಾಯ್ದೆಯಡಿ ಬರುವುದಿಲ್ಲ ಎಂದು ಕಂದಾಯ ಇಲಾಖೆಗೆ ಬರೆದರು. ಬಳಿಕ ಕಂದಾಯ ಇಲಾಖೆಯು ಕಾನೂನು ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿತು ಎಂದು ವಿವರಿಸಿದರು.

ಐಎಂಎ ಸಂಸ್ಥೆಯ ಕುರಿತು ತನಿಖೆ ನಡೆಸುವಂತೆ ಆರ್‌ಬಿಐ ಮತ್ತೊಮ್ಮೆ ಪತ್ರ ಬರೆಯಿತು. ಆಗಲೂ ಪೊಲೀಸ್‌ ಕೆಪಿಐಡಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೇಳಿತು. ಅದನ್ನು ಕಾನೂನು ಇಲಾಖೆಗೆ ಕಳುಹಿಸಿಕೊಡಲಾಗಿದೆ. ಎರಡು ಬಾರಿ ಬರೆದ ಪತ್ರಗಳನ್ನು ಕಂದಾಯ ಇಲಾಖೆ ಒಪ್ಪಿಲ್ಲ. ಪಾರದರ್ಶಕ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲಾಗಿದೆ. ಐಎಂಎ ಮಾದರಿಯಲ್ಲಿ ಈಗಾಗಲೇ ಜನರಿಗೆ ವಂಚನೆ ಮಾಡಿರುವ 11 ಕಂಪನಿಗಳ ವಿರುದ್ಧ ಕೆಪಿಐಡಿ ಕಾಯ್ದೆಯಡಿ ಕಂದಾಯ ಇಲಾಖೆಯು ನೋಟಿಸ್‌ ನೀಡಿ ಕ್ರಮ ಕೈಗೊಂಡಿದೆ. ಆದರೆ, ಐಎಂಎ ಸಂಸ್ಥೆಯು ಹಣ ಹೂಡಿದವರನ್ನು ಠೇವಣಿದಾರರು ಎಂದು ಪರಿಗಣಿಸಿಲ್ಲ. ಹೂಡಿಕೆದಾರರು (ಷೇರುದಾರರು) ಎಂದು ಪರಿಗಣಿಸಿರುವ ಕಾರಣ ಇಲಾಖೆಯು ಕ್ರಮ ಕೈಗೊಳ್ಳುವುದು ಕಷ್ಟಕರವಾಗಿದೆ. ಆದರೂ, ಐಎಂಎನಲ್ಲಿ ಹಣ ಹೂಡಿದ ಠೇವಣಿದಾರರಿಗೆ ನ್ಯಾಯ ಕೊಡಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕೆಪಿಐಡಿ ಕಾಯ್ದೆ ತಿದ್ದುಪಡಿಗೆ ಚಿಂತನೆ

ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವವರು ಠೇವಣಿದಾರರಾಗುವುದಿಲ್ಲ. ಅವರು ಕಂಪನಿಯ ಷೇರುದಾರರಾಗಿದ್ದಾರೆ. ಠೇವಣಿದಾರರಿಗೆ ಅನ್ಯಾಯವಾದರೆ ಮಾತ್ರೆ ಕೆಪಿಐಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ ಅಧಿಕಾರ ಇದೆ. ಹೀಗಾಗಿ ಕೆಪಿಐಡಿ ಕಾಯ್ದೆಗೆ ತಿದ್ದುಪಡಿ ತರುವ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

ಲಿಮಿಟೆಡ್‌ ಲಯೆಬಿಲಿಟಿ ಪಾರ್ಟನರ್ಸ್‌ (ಎಲ್‌ಎಲ್‌ಪಿ) ಕಾಯ್ದೆಯನ್ನು ಕೆಪಿಐಡಿ ಕಾಯ್ದೆಯ ವ್ಯಾಪ್ತಿಗೆ ತಂದಲ್ಲಿ ಮುಂದಿನ ದಿನದಲ್ಲಿ ಇಂತಹ ಘಟನೆಗಳು ನಡೆದರೆ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಹೀಗಾಗಿ ಎಲ್‌ಎಲ್‌ಪಿ ಕಾಯ್ದೆಯನ್ನು ಕೆಪಿಐಡಿ ಕಾಯ್ದೆಯೊಂದಿಗೆ ಸೇರಿಸುವ ಬಗ್ಗೆ ಗಂಭೀರವಾಗಿ ಚರ್ಚೆಗಳು ನಡೆದಿವೆ ಎಂದು ಹೇಳಿದರು.

ಐಎಂಎ ಪ್ರಕರಣ ಬಳಿಕ ಸರ್ಕಾರವು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಲವು ಸಲಹೆಗಳನ್ನು ನೀಡಿದ್ದಾರೆ. ಅದಷ್ಟುಶೀಘ್ರದಲ್ಲಿಯೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

click me!