ವಾದ್ರಾಗೆ ಜಮೀನು ನೀಡಿಕೆಯಲ್ಲಿ ಅವ್ಯವಹಾರ

Published : Sep 01, 2016, 03:06 PM ISTUpdated : Apr 11, 2018, 12:41 PM IST
ವಾದ್ರಾಗೆ ಜಮೀನು ನೀಡಿಕೆಯಲ್ಲಿ ಅವ್ಯವಹಾರ

ಸಾರಾಂಶ

ನವದೆಹಲಿ/ಚಂಡೀಗಡ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾರ್ದಾ ವಿರುದ್ಧ ಕೇಳಿ ಬಂದ ಭೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಹರ್ಯಾಣ ಸರ್ಕಾರ ರಚಿಸಿದ್ದ ನ್ಯಾ.ಎಸ್.ಎನ್.ಧಿಂಗ್ರಾ ನೇತೃತ್ವದ ಆಯೋಗ ವರದಿ ಸಲ್ಲಿಸಿದೆ. ಒಟ್ಟು ೧೮೨ ಪುಟಗಳ ವರದಿಯಲ್ಲಿ ಹರ್ಯಾಣ ಸರ್ಕಾರದ ಕೆಲ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಸಲಹೆ ಮಾಡಿದೆ. ಇದರ ಜತೆಗೆ ವಾದ್ರಾ ಮತ್ತು ಅವರ ಕಂಪನಿಗಳಿಗೆ ಜಮೀನು ನೀಡಿಕೆಯಲ್ಲಿ ಮಾಜಿ ಸಿಎಂ ಭೂಪಿಂದರ್ ಸಿಂಗ್ ನೇತೃತ್ವದ ಸರ್ಕಾರ ನಿಯಮ ಉಲ್ಲಂಘಿಸಿದೆ. ಒಟ್ಟು ಆರು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಶಿಫಾರಸು ಮಾಡಿದೆ.

ನ್ಯಾ.ಧಿಂಗ್ರಾ ಅವರು ಎರಡು ಭಾಗಗಗಳಾಗಿ ವರದಿ ಸಲ್ಲಿಸಿದ್ದಾರೆ. ಮೊದಲ ಭಾಗದಲ್ಲಿ ಸಾಕ್ಷಿಗಳು ಮತ್ತು ಎರಡನೇ ಭಾಗದಲ್ಲಿ ಯಾವ ರೀತಿಯಲ್ಲಿ ವಂಚನೆ ಉಂಟಾಗಿದೆ ಎನ್ನುವುದನ್ನು ವಿವರವಾಗಿ ಉಲ್ಲೇಖಿಸಲಾಗಿದೆ. ಮೂರನೇ ಭಾಗದಲ್ಲಿ ವರದಿಯಲ್ಲಿ ಮಾಡಲಾಗಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಿದ್ದಾರೆ. ಗಮನಾರ್ಹ ಅಂಶವೆಂದರೆ ರಾಬರ್ಟ್ ವಾದ್ರಾ ವಿರುದ್ಧ ಆರೋಪವಿದ್ದರೂ ಅವರನ್ನು ವಿಚಾರಣೆಗಾಗಿ ಕರೆಯಿಕೊಳ್ಳಲಾಗಿಲ್ಲ.

ಹರ್ಯಾಣದ ಗುರುಗಾಂವ್‌ನ ಸೆಕ್ಟರ್ ೮೩ರಲ್ಲಿ ಒಟ್ಟು ₹೫೮ ಕೋಟಿ ಮೊತ್ತದ ೩.೫ ಎಕರೆ ಜಮೀನನ್ನು ರಾಬರ್ಟ್ ವಾದ್ರಾ ಅವರ ಮೆಸರ್ಸ್ ಸ್ಕೈಲೈನ್ ಹಾಸ್ಪಿಟಾಲಿಟಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್‌ಎಫ್‌ಗೆ ನಿಯಮ ಮೀರಿ ಜಮೀನು ನೀಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಭೂಪೀಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ನಿಯಮಗಳನ್ನು ಉಲ್ಲಂಘಿಸಿತ್ತು ಎಂದು ಆರೋಪಿಸಲಾಗಿತ್ತು. ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾ.ಧಿಂಗ್ರಾ ‘‘ಅವ್ಯವಹಾರ ಏನೂ ನಡೆಯದೇ ಇರುತ್ತಿದ್ದರೆ ಏನೂ ಆಗಿರಲಿಲ್ಲ ಎಂದು ವರದಿ ಸಲ್ಲಿಸುತ್ತಿದೆ. ಆದರೆ ಏನೂ ಆಗಿಲ್ಲ ಎಂದಾದರೆ ೧೮೨ ಪುಟಗಳ ವರದಿ ನೀಡುವುದಾದರೂ ಹೇಗೆ?,’’ ಎಂದಿದ್ದಾರೆ. ಕಾಂಗ್ರೆಸ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘‘ನೀವೇ (ಮಾಧ್ಯಮಗಳೇ) ಈ ಬಗ್ಗೆ ವರದಿ ಮಾಡುತ್ತಿವೆ,’’ ಎಂದರು.

ಭೂ ಅವ್ಯವಹಾರ ಆರೋಪ ೨೦೧೪ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಿ ಬದಲಾವಣೆಯಾಗಿತ್ತು. ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ೨೦೧೫ರ ಮೇ ೧೪ರಂದು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಧಿಂಗ್ರಾ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿ ಆದೇಶ ಹೊರಡಿಸಿತ್ತು. ಈ ವರ್ಷದ ಜೂನ್‌ನಲ್ಲಿ ಆಯೋಗದ ತನಿಖಾ ಅವಧಿಯನ್ನು ವಿಸ್ತರಿಸಲಾಗಿತ್ತು. ಮಹಾಲೇಖಪಾಲರ ವರದಿಯಲ್ಲಿ ಕೂಡ ವಾದ್ರಾ ನೇತೃತ್ವದ ಕಂಪನಿ ನಿಯಮಗಳನ್ನು ಉಲ್ಲಂಘಿಸಿತ್ತು ಎಂದು ಆರೋಪಿಸಿತ್ತು.

ಇದೇ ವೇಳೆ ವರದಿಯ ಬಗ್ಗೆ ಕಾಂಗ್ರೆಸ್ ಕಠೋರವಾಗಿಯೇ ಪ್ರತಿಕ್ರಿಯೆ ನೀಡಿದೆ. ಈ ಹಿಂದೆಯೇ ವರದಿ ಸೋರಿಕೆಯಾಗಿದೆ. ಕೇವಲ ಮಾನ ಹರಾಜು ಹಾಕುವ ಉದ್ದೇಶದಿಂದಲೇ ಅದನ್ನು ಸಲ್ಲಿಸಲಾಗಿದೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ನವದೆಹಲಿಯಲ್ಲಿ ಆರೋಪಿಸಿದ್ದಾರೆ.

೨೦೧೨ರಲ್ಲಿ ಹಿರಿಯ ಐಎಎಸ್ ಅಧಿಕಾರಿ ಡೀಲ್‌ಗೆ ಸಂಬಂಧಿಸಿದ ಮ್ಯುಟೇಷನ್ ಅನ್ನು ರದ್ದು ಮಾಡಿದ್ದರು. ಇದಾದ ಬಳಿಕ ಅವರನ್ನು ಬಿ.ಎಸ್.ಹೂಡಾ ನೇತೃತ್ವದ ಸರ್ಕಾರ ಪದೇ ಪದೆ ವರ್ಗಾವಣೆ ಮಾಡಿತ್ತು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ