
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊನೆಗೂ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಯೊಂದಕ್ಕೆ ನಾಮಕರಣ ಮಾಡಲು ಕ್ರಮ ಕೈಗೊಂಡಿದೆ.
ಯಲಹಂಕ ನ್ಯೂಟೌಟ್‌ನ ಎ ಸೆಕ್ಟರ್ 13ನೇ ‘ಎ’ ಮುಖ್ಯರಸ್ತೆ, 3ನೇ ‘ಎ’ ಅಡ್ಡರಸ್ತೆಗೆ ‘ಮೇಯರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಬಿಬಿಎಂಪಿ ನಿರ್ಧರಿಸಿದ್ದು, ಭಾನುವಾರ ಮಧ್ಯಾಹ್ನ 12.15ಕ್ಕೆ ನಿಗದಿತ ರಸ್ತೆಯಲ್ಲಿ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ರಸ್ತೆ ನಾಮಫಲಕ ಅನಾವರಣಗೊಳಿಸಲಿದ್ದಾರೆ.
ಬೆಂಗಳೂರು ಮೂಲದವರಾದ ಮೇಯರ್ ಅಕ್ಷಯ್ ಗಿರೀಶ್ ಕುಮಾರ್ ಅವರು ಕಾಶ್ಮೀರದಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿ ಎರಡು ವರ್ಷ ಕಳೆದರೂ ಬಿಬಿಎಂಪಿ 2018ರ ಫೆಬ್ರವರಿಯಲ್ಲಿ ಕೈಗೊಂಡಿದ್ದ ನಿರ್ಣಯದಂತೆ ಅವರ ಹೆಸರನ್ನು ಯಲಹಂಕದ ರಸ್ತೆಯೊಂದಕ್ಕೆ ನಾಮಕರಣ ಮಾಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತು.
ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮೇಯರ್ ಅವರಿಗೆ ಪತ್ರ ಬರೆದು ಆದಷ್ಟುಬೇಗ ನಾಮಕರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಬಗ್ಗೆ ‘ಕನ್ನಡಪ್ರಭ’ ನವೆಂಬರ್ 27ರಂದು ವರದಿ ಪ್ರಕಟಿಸಿತ್ತು.
ಆರ್‌ಸಿ ಪತ್ರಕ್ಕೆ ಸ್ಪಂದನೆ:
ರಾಜೀವ್ ಚಂದ್ರಶೇಖರ್ ಅವರ ಪತ್ರಕ್ಕೆ ಸ್ಪಂದಿಸಿದ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು, ಸ್ಥಳೀಯ ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ಯಲಹಂಕ ನ್ಯೂಟೌನ್‌ನ ಬದಲೀ ರಸ್ತೆಯೊಂದಕ್ಕೆ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರು ನಾಮಕರಣ ಮಾಡಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೆ, ರಾಜೀವ್ ಚಂದ್ರಶೇಖರ್ ಅವರ ಮನವಿಯಂತೆ ರಸ್ತೆಗೆ ಈ ಹಿಂದಿನ ನಿರ್ಣಯದಂತೆ ‘ಅಕ್ಷಯ್ ಗಿರೀಶ್ ಕುಮಾರ್ ರಸ್ತೆ’ ಎಂಬ ಹೆಸರು ಬದಲು ‘ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಮೂಲತಃ ಬೆಂಗಳೂರಿನ ಯಲಹಂಕದವರಾಗಿದ್ದು, ಭಾರತೀಯ ಸೇನೆಯಲ್ಲಿ ದಶಕಗಳ ಕಾಲ ದೇಶ ರಕ್ಷಣೆ ಸೇವೆ ಸಲ್ಲಿಸಿದ್ದ ಅವರು, 2016ರ ನವೆಂಬರ್‌ನಲ್ಲಿ ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ವೀರ ಮರಣವನ್ನಪ್ಪಿದ್ದರು. ದೇಶಕ್ಕಾಗಿ ಪ್ರಾಣ ತೆತ್ತ ಮಹನೀಯರ ನೆನಪು ಶಾಶ್ವತವಾಗಿ ಉಳಿಸುವ ಸಲುವಾಗಿ ಈ ಮೊದಲು ಬಿಬಿಎಂಪಿಯು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13ನೇ ಮುಖ್ಯರಸ್ತೆಯಿಂದ ಮೇಜರ್ ಉನ್ನಿಕೃಷ್ಣನ್ ರಸ್ತೆವರೆಗಿನ ‘16ನೇ ಅಡ್ಡರಸ್ತೆಗೆ’ ಹುತಾತ್ಮ ಮೇಜರ್ ‘ಅಕ್ಷಯ್ ಗಿರೀಶ್ ಕುಮಾರ್’ ಅವರ ಹೆಸರು ನಾಮಕರಣ ಮಾಡಲು 2018ರ ಫೆಬ್ರವರಿ 19ರಂದು ನಡೆಸಲಾದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ಆದರೆ, 10 ತಿಂಗಳು ಕಳೆದರೂ ಈ ನಾಮಕರಣ ಮಾಡದೆ ನಿರ್ಲಕ್ಷ್ಯ ತೋರಿತ್ತು. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಬಿಬಿಎಂಪಿ ಹೊಸ ರಸ್ತೆಯನ್ನು ಗುರುತಿಸಿ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರು ನಾಮಕರಣಕ್ಕೆ ಮುಂದಾಗಿದೆ.
ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ‘ಕನ್ನಡಪ್ರಭ’ ನ.27ರಂದು ವರದಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.