ನಿರ್ದೇಶನದಿಂದ ನಟನೆಯತ್ತ ವಾಲಿದ ರಿಷಬ್ ಶೆಟ್ಟಿ; ಹೊಸ ಚಿತ್ರದಲ್ಲಿ ಯಾವ ಪಾತ್ರ ಮಾಡ್ತಾ ಇದ್ದಾರೆ ಗೊತ್ತಾ?

By Suvarna Web DeskFirst Published Mar 9, 2018, 1:15 PM IST
Highlights

 ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಂ’ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕ.  ಪತ್ತೇದಾರ ದಿವಾಕರ ಪಾತ್ರದಲ್ಲಿ ನಟಿಸುತ್ತಿರುವ ರಿಷಬ್ ತನ್ನ ನಟನೆಯ ಕನಸು, ದಿವಾಕರ ಎಂಬ ಪಾತ್ರ, ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು (ಮಾ. 09): ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಂ’ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕ.  ಪತ್ತೇದಾರ ದಿವಾಕರ ಪಾತ್ರದಲ್ಲಿ ನಟಿಸುತ್ತಿರುವ ರಿಷಬ್ ತನ್ನ ನಟನೆಯ ಕನಸು, ದಿವಾಕರ ಎಂಬ ಪಾತ್ರ, ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡಿದ್ದಾರೆ.

ಯಾರಿವನು ಪತ್ತೇದಾರ ದಿವಾಕರ?
ನಾನು ಸಿನಿಮಾ ನೋಡಿ ಬೆಳೆದಂತೆ, ಸಿನಿಮಾವನ್ನು ಪ್ರೀತಿಸಿದಂತೆ ಪತ್ತೇದಾರಿಕೆಯನ್ನು ನೋಡಿಕೊಂಡು ಬೆಳೆದವನು ಪತ್ತೇದಾರ ದಿವಾಕರ. ಅಲ್ಲದೇ ಚಿಕ್ಕಂದಿನಲ್ಲಿ ಸಿನಿಮಾ ನೋಡಲು ಶುರು ಮಾಡಿದಾಗ ಅಣ್ಣಾವ್ರನ್ನು ನಾನು ನೋಡಿದ್ದು ಇದೇ ಲುಕ್‌ನಲ್ಲಿ. ಇವೆಲ್ಲಾ ಕಾರಣಗಳಿಂದ ದಿವಾಕರ ನನಗೆ ತುಂಬಾ ಇಷ್ಟವಾದ.
 

ಯಾಕೆ ಈ ಕತೆ ನಿಮ್ಮನ್ನು ಆಕರ್ಷಿಸಿತು?
ಕನ್ನಡದಲ್ಲಿ ಮೊದಲೆಲ್ಲಾ ಪತ್ತೇದಾರಿ  ಕಾದಂಬರಿಗಳು ಬರುತ್ತಿತ್ತಲ್ಲ. ಅದೇ ಫೀಲ್ ಕೊಡುವ ಕತೆ ಇದು. ಈ ಕತೆ ಶೆರ್ಲಾಕ್  ಹೋಮ್ಸ್ ಕತೆಗಳಂತೆ ಇಲ್ಲ. ಗಂಭೀರವಾಗಿ ಹೋಗಲ್ಲ. ಕತೆಯಲ್ಲಿ ಸಸ್ಪೆನ್ಸ್ ಇಟ್ಟುಕೊಂಡೇ ತಮಾಷೆಯಾಗಿಯೇ ಚಿತ್ರ ಸಾಗುತ್ತದೆ. ಎಲ್ಲೂ ಬೋರ್ ಆಗಲ್ಲ. ಅಷ್ಟು ಚೆಂದ ಚಿತ್ರಕತೆ  ಮಾಡಿದ್ದಾರೆ ನಿರ್ದೇಶಕರು. ಇನ್ನು ಪಾತ್ರಗಳೂ ಕೂಟ ಬಹಳ ಇಂಟರೆಸ್ಟಿಂಗ್. ಹರಿಪ್ರಿಯಾ  ಅವರಂತೂ ತುಂಬಾ ಚೆನ್ನಾಗಿ ನಟಿಸುತ್ತಿದ್ದಾರೆ. ನಾನು ಮತ್ತು ಅವರು ಫ್ರೆಂಡ್ಸು. ಏನ್ ಗುರು,  ಹೇಗೆ ಗುರೂ ಅಂತ ಹುಡುಗರ ಥರಾನೇ ಮಾತನಾಡಿಕೊಳ್ಳುತ್ತೇವೆ. ಆಗಾಗ ಅವರಿಗೆ ಏನ್  ಗುರೂ ಹಳೇ ಕಾಲದ ಹೀರೋಯಿನ್ ಥರ  ಕಾಣ್ತೀಯಲ್ಲ ಅನ್ನುತ್ತೇನೆ.

ನೀವು ಈಗಾಗಲೇ ಪತ್ತೇದಾರ  ದಿವಾಕರನೇ ಆಗಿ ಹೋದಂತಿದೆ..
ನಾನು ನೋಡಿದಂತೆ ರಕ್ಷಿತ್ ಶೆಟ್ಟಿ ಪೂರ್ತಿಯಾಗಿ  ಪಾತ್ರದ ಒಳಗೆ ಹೋದ ಮೇಲೆಯೇ ನಟಿಸಲು  ಶುರು ಮಾಡುತ್ತಾನೆ. ಅಚ್ಯುತ್ ಸರ್ ಅಂತೂ ನೀರಿನ ಥರ. ಯಾವ ಪಾತ್ರೆಗೆ ಹಾಕಿದರೂ ಹೊಂದಿಕೊಳ್ಳುತ್ತಾರೆ. ಇನ್ನು ನಾನು ಇತ್ತೀಚೆಗೆ
ನೋಡಿದ ಒಂದು ಯೂನಿವರ್ಸಿಟಿ ಎಂದರೆ ಅದು ಅನಂತ್‌ನಾಗ್.  ‘ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರದಲ್ಲಿ ನಟಿಸುತ್ತಿರುವಾಗ ಅವರು ಮಾಡಿಕೊಂಡ ಸಿದ್ಧತೆ ನೋಡಿ ನನಗೆ ಬಹಳ  ಖುಷಿಯಾಯಿತು. ನಟಿಸಬೇಕು ಎಂದುಕೊಳ್ಳುವವರು ಅವರ ಜೊತೆ  ಇದ್ದು ಅವರು ಏನು ಮಾಡುತ್ತಾರೆ ಎಂದು ನೋಡಿದರೆ ಸಾಕು. ಅವರೇ  ಒಂದು ಜೀವಂತ ಲೈಬ್ರರಿ ಇದ್ದಂತೆ. ಅವರ ಟೆಕ್ನಿಕ್‌ಗಳನ್ನು ನಾನು ನೋಡಿ  ಸ್ವಲ್ಪ ಕಲಿತಿದ್ದೇನೆ. ನಿರ್ದೇಶಕನಾಗಿ ನನ್ನ ಪಾತ್ರಗಳನ್ನು ಬೇರೆಯವರಿಗೆ ಹೇಳುವುದು ಸುಲಭ. ಆದರೆ ಬೇರೆಯವರ ಪಾತ್ರದೊಳಕ್ಕೆ ನಾನು  ಹೋಗುವುದು ಅಷ್ಟು ಸುಲಭವಲ್ಲ. ಕತೆ ಮತ್ತು ಪಾತ್ರ ಕೇಳಿ ನಾನು ಇಷ್ಟರವರೆಗೆ ನೋಡಿದ ಸಿನಿಮಾಗಳನ್ನು ನೆನೆದುಕೊಂಡು ನಾನೇ  ದಿವಾಕರ ಆದರೆ ಹೇಗೆ ಎಂದು ಕಲ್ಪಿಸಿಕೊಂಡು ಆ ಪಾತ್ರವಾದೆ. ಈಗಂತೂ  ದಿವಾಕರನೇ ಆಗಿ  ಹೋಗಿದ್ದೇನೆ.

ಹೀರೋ ಆಗುವ ಸುಖ ಮತ್ತು ಕಷ್ಟ ಹೇಗಿದೆ?
ಸ್ವಲ್ಪ ಟೆನ್ಷನ್ ಇದೆ. ಈಗ ನಾನು ಹೀರೋ ಆದ ಮೇಲೆ ಬೇರೆ  ಹೀರೋಗಳ ಬಗ್ಗೆ ಪಾಪ ಅನ್ನಿಸ್ತಿದೆ. ಈಗ ನಾನು ಸೆಟ್‌ನಲ್ಲಿದ್ದರೆ ಮೇಕಪ್‌ನವರು, ನಿರ್ದೇಶಕರು ಬಿಸಿಲಿಗೆ ಹೋಗಬೇಡಿ, ಕೊಡೆ  ಹಿಡಿದುಕೊಂಡೇ ತಿರುಗಾಡಿ ಅಂತ ಬೈಯುತ್ತಾರೆ. ನನಗೆ ಇದೆಲ್ಲಾ  ಅಭ್ಯಾಸ ಇಲ್ಲ. ಯಾರೋ ಕೊಡೆ ಹಿಡಿದುಕೊಳ್ಳುವುದು, ನಾನು  ಓಡಾಡುವುದು ಸರಿ ಬರಲ್ಲ. ನಿರ್ದೇಶಕನಾಗಿದ್ದಾಗಲಂತೂ ನಾನು ಕ್ಯಾರವಾನ್‌ನಲ್ಲಿ ಕೂತಿದ್ದೇ ಇಲ್ಲ. ಎಲ್ಲೆಲ್ಲೋ ಓಡಾಡ್ಕೊಂಡು, ಯಾರದೋ ಕಾಲೆಳೆದುಕೊಂಡು ಇದಿದ್ದೇ ಜಾಸ್ತಿ. ಆದರೆ ಶಿಸ್ತು ರೂಢಿಸಿಕೊಳ್ಳಬೇಕಾಗಿದೆ. ಒಂದೊಂದ್ಸಲ ಸುಮ್ಮನೆ ಕೂರಬೇಕು. ಇವೆಲ್ಲಾ ಅಭ್ಯಾಸ ಆದ್ರೆ ಹೇಗೆ ಅಂತ  ಟೆನ್ಷನ್ ಕೂಡ ಆಗತ್ತೆ.


 

click me!