251 ರೂ.ಗೆ ಸ್ಮಾರ್ಟ್'ಫೋನ್ ಕೊಡ್ತೀನೆಂದವ ಈಗ ಜೈಲುಪಾಲು

By Suvarna Web DeskFirst Published Feb 24, 2017, 11:03 AM IST
Highlights

ಆಯಾಮ್ ಎಂಟರ್'ಪ್ರೈಸಸ್ ನೀಡಿರುವ ದೂರಿನ ಪ್ರಕಾರ ರಿಂಗಿಂಗ್ ಬೆಲ್ಸ್ ಸಂಸ್ಥೆಯು 16 ಲಕ್ಷ ರೂ.ನಷ್ಟು ವಂಚನೆ ಮಾಡಿದೆ.

ನವದೆಹಲಿ(ಫೆ. 24): ಕೇವಲ 251 ರೂ.ಗೆ ಫ್ರೀಡಂ ಸ್ಮಾರ್ಟ್'ಫೋನ್ ಕೊಡುತ್ತೇನೆಂದು ಪ್ರಚಾರ ಮಾಡಿ ದೇಶಾದ್ಯಂತ ದೊಡ್ಡ ಸುದ್ದಿ ಸೃಷ್ಟಿಸಿದ್ದ ರಿಂಗಿಂಗ್ ಬೆಲ್ಸ್ ಸಂಸ್ಥೆಯ ಮುಖ್ಯಸ್ಥ ಮೋಹಿತ್ ಗೋಯೆಲ್ ಈಗ ಜೈಲುಪಾಲಾಗಿದ್ದಾರೆ. ವಂಚನೆಯ ಪ್ರಕರಣವೊಂದರಲ್ಲಿ ಘಾಜಿಯಾಬಾದ್'ನ ಪೊಲೀಸರು ಮೋಹಿತ್'ರನ್ನು ಬಂಧಿಸಿದ್ದಾರೆ. ಘಾಜಿಯಾದ ಆಯಾಮ್ ಎಂಟರ್'ಪ್ರೈಸಸ್ ಎಂಬ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ ಮೋಹಿತ್ ಗೋಯೆಲ್'ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಏನಿದು ಪ್ರಕರಣ?
ಆಯಾಮ್ ಎಂಟರ್'ಪ್ರೈಸಸ್ ನೀಡಿರುವ ದೂರಿನ ಪ್ರಕಾರ ರಿಂಗಿಂಗ್ ಬೆಲ್ಸ್ ಸಂಸ್ಥೆಯು 16 ಲಕ್ಷ ರೂ.ನಷ್ಟು ವಂಚನೆ ಮಾಡಿದೆ. ರಿಂಗಿಂಗ್ ಬೆಲ್ಸ್ ಕಂಪನಿಯು ಫ್ರೀಡಂ 251 ಸ್ಮಾರ್ಟ್'ಫೋನ್ ಸೇರಿದಂತೆ ತನ್ನ ಉತ್ಪನ್ನಗಳ ಮಾರಾಟಕ್ಕೆ ವಿತರಕರಾಗುವಂತೆ ಆಯಾಮ್ ಎಂಟರ್'ಪ್ರೈಸಸ್ ಸಂಸ್ಥೆಯನ್ನು ಕೇಳಿಕೊಂಡಿದೆ. ಇದಕ್ಕೆ ಒಪ್ಪಿದ ಬಳಿಕ ಆಯಾಮ್ ಎಂಟರ್'ಪ್ರೈಸಸ್ ಸಂಸ್ಥೆಯು 30 ಲಕ್ಷ ರೂ.ಗಳನ್ನು ಆನ್'ಲೈನ್ ಮೂಲಕ ರಿಂಗಿಂಗ್ ಬೆಲ್ಸ್ ಕಂಪನಿಗೆ ಪಾವತಿ ಮಾಡಿದೆ. ಆದರೆ, 13 ಲಕ್ಷ ಮೌಲ್ಯದಷ್ಟು ಉತ್ಪನ್ನಗಳು ಮಾತ್ರ ಡೆಲಿವರಿ ಆಗುತ್ತವೆ. ಬಳಿಕ ವಿಚಾರಿಸಿದಾಗ ಇನ್ನೊಂದು ಲಕ್ಷ ಮೌಲ್ಯದ ಉತ್ಪನ್ನಗಳು ಬರುತ್ತವೆ. ಉಳಿದ 16 ಲಕ್ಷ ರೂ ಮೌಲ್ಯದಷ್ಟು ಉತ್ಪನ್ನಗಳು ಬರುವುದೇ ಇಲ್ಲ. ಆಯಾಮ್ ಎಂಟರ್'ಪ್ರೈಸಸ್'ನ ಮಾಲೀಕರು ಈ ಬಗ್ಗೆ ವಿಚಾರಿಸಿದಾಗ ರಿಂಗಿಂಗ್ ಬೆಲ್ಸ್ ಉಲ್ಟಾ ಹೊಡೆಯುತ್ತದೆ. 16 ಲಕ್ಷ ಹಣದ ಬಗ್ಗೆ ಮತ್ತೊಮ್ಮೆ ವಿಚಾರಿಸಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತದೆ ಎಂದು ಎಫ್'ಐಆರ್'ನಲ್ಲಿ ತಿಳಿಸಲಾಗಿದೆ.

ರಿಂಗಿಂಗ್ ಬೆಲ್ಸ್ ಹೇಳೋದೇನು?
"ಆಯಾಮ್ ಎಂಟರ್'ಪ್ರೈಸಸ್ ಸೇರಿದಂತೆ ಹಲವು ಡಿಸ್ಟ್ರಿಬ್ಯೂಟರ್'ಗಳಿಗೆ ನೀಡಬೇಕಾದ ಹಣವನ್ನು ನಾವು ಬಾಕಿ ಉಳಿಸಿಕೊಂಡಿದ್ದೇವೆ. ಮಾರ್ಚ್ 31ರೊಳಗೆ ಬಾಕಿ ತೀರಿಸುತ್ತೇವೆಂದು ಎಲ್ಲರಿಗೂ ವಾಗ್ದಾನ ನೀಡಲಾಗಿದೆ. ಆದರೆ, ಆಯಾಮ್ ಎಂಟರ್'ಪ್ರೈಸಸ್ ಸಂಸ್ಥೆ ಯಾಕೆ ದೂರು ನೀಡಿದೆ ಎಂಬುದು ಅರ್ಥ ಆಗುತ್ತಿಲ್ಲ" ಎಂದು ರಿಂಗಿಂಗ್ ಬೆಲ್ಸ್ ನಿರ್ದೇಶಕ ಮೋಹಿತ್ ಗೋಯೆಲ್ ಅವರ ಸೋದರ ಅನ್ಮೋಲ್ ಗೋಯೆಲ್ ಹೇಳಿದ್ದಾರೆ.

click me!