
ನವದೆಹಲಿ[ಫೆ.10]: ಬರೋಬ್ಬರಿ 3.71 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಕೇಶ್ ಅಂಬಾನಿ ದಾನದಲ್ಲೂ ಮುಂಚೂಣಿಯಲ್ಲಿದ್ದಾರೆ. ಒಂದು ವರ್ಷದ ಅವಧಿಯಲ್ಲಿ 437 ಕೋಟಿ ರು.ಗಳನ್ನು ಸಮಾಜಸೇವಾ ಕಾರ್ಯಗಳಿಗೆ ತೊಡಗಿಸುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ.
ಚೀನಾ ಮೂಲದ ಹುರೂನ್ ಸಂಶೋಧನಾ ಸಂಸ್ಥೆಯು ಸಮಾಜ ಸೇವೆಗಾಗಿ ದಾನ ಮಾಡಿದ 39 ಭಾರತೀಯರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಮುಕೇಶ್ ಪ್ರಥಮ ಸ್ಥಾನದಲ್ಲಿದ್ದಾರೆ. 2017ರ ಅ.1ರಿಂದ 2018ರ ಸೆ.30ರ ಅವಧಿಯಲ್ಲಿ 10 ಕೋಟಿ ರು.ಗೂ ಅಧಿಕ ಹಣವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟವ್ಯಕ್ತಿಗಳ ವಿವರವನ್ನು ಕಲೆಹಾಕಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಅವಧಿಯಲ್ಲಿ ಒಟ್ಟಾರೆ ಭಾರತೀಯ ಉದ್ಯಮಿಗಳು 1560 ಕೋಟಿ ರು. ಹಣವನ್ನು ದಾನವಾಗಿ ನೀಡಿದ್ದಾರೆ.
200 ಕೋಟಿ ರು. ದಾನದೊಂದಿಗೆ ಪಿರಾಮಲ್ ಗ್ರೂಪ್‌ನ ಅಜಯ್ ಪಿರಾಮಲ್ 2ನೇ ಸ್ಥಾನದಲ್ಲಿದ್ದರೆ, 113 ಕೋಟಿ ರು. ದಾನ ನೀಡುವ ಮೂಲಕ ವಿಪ್ರೋ ಕಂಪನಿಯ ಅಜೀಂ ಪ್ರೇಮ್‌ಜಿ 3ನೇ ಸ್ಥಾನದಲ್ಲಿದ್ದಾರೆ. ಲುಪಿನ್ ಗ್ರೂಪ್‌ನ ಮಂಜು ಡಿ. ಗುಪ್ತಾ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಮಹಿಳೆಯಾಗಿದ್ದಾರೆ. ಮುಕೇಶ್ ಅವರು ರಿಲಯನ್ಸ್ ಫೌಂಡೇಶನ್ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೊಡುಗೆ ನೀಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಸೇವೆ ಅವರ ನೆಚ್ಚಿನ ಕ್ಷೇತ್ರಗಳಾಗಿವೆ ಎಂದು ಹುರೂನ್ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ