ನೋಟು ರದ್ದು ನೀತಿ ಮೆಚ್ಚಿದ್ದ ಥೇಲರ್‌ಗೆ ಅರ್ಥಶಾಸ್ತ್ರ ನೊಬೆಲ್; ರಾಜನ್’ಗಿಲ್ಲ ಅದೃಷ್ಟ

By Suvarna Web DeskFirst Published Oct 10, 2017, 1:21 PM IST
Highlights

ವಿಶ್ವಪ್ರಸಿದ್ಧ ಆರ್ಥಿಕ ತಜ್ಞರೂ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಂ ರಾಜನ್ ಅವರಿಗೆ ಅರ್ಥಶಾಸ್ತ್ರ ನೊಬೆಲ್ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಸ್ಟಾಕ್‌ಹೋಮ್: ವಿಶ್ವಪ್ರಸಿದ್ಧ ಆರ್ಥಿಕ ತಜ್ಞರೂ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಂ ರಾಜನ್ ಅವರಿಗೆ ಅರ್ಥಶಾಸ್ತ್ರ ನೊಬೆಲ್ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಹಣಕಾಸು ನೀತಿ ನಿರೂಪಕರು ಯಾವಾಗಲೂ ವಿಚಾರಗಳನ್ನೇ ಇಟ್ಟುಕೊಂಡು ನಿರ್ಧಾರ ಕೈಗೊಳ್ಳುವುದಿಲ್ಲ. ಬದಲಿಗೆ ಆಳವಾದ ಮಾನವೀಯತೆಯಿಂದಲೂ ಕೆಲಸ ಮಾಡುತ್ತಾರೆ ಎಂಬುದನ್ನು ನಿರೂಪಿಸಿದ ಅಮೆರಿಕದ ಅರ್ಥಶಾಸ್ತ್ರಜ್ಞ ರಿಚರ್ಡ್ ಥೇಲರ್ ಅವರಿಗೆ ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಲಭಿಸಿದೆ.

ವಿಶೇಷವೆಂದರೆ ಕಳೆದ ವರ್ಷ ಭಾರತ ಸರ್ಕಾರ ಅಪನಗದೀಕರಣ ನೀತಿ ಜಾರಿ ತಂದಿದ್ದಾಗ, ಅದನ್ನು ರಿಚರ್ಡ್ ಅದನ್ನು ಬೆಂಬಲಿಸಿದ್ದರು. ಇದು ನಾನು ಬಹು ಸಮಯದಿಂದ ಬೆಂಬಲಿಸಿಕೊಂಡು ಬಂದಿದ್ದ ನೀತಿ ಎಂದು ಶ್ಲಾಘಿಸಿದ್ದರು. ನಗದು ರಹಿತ ವ್ಯವಸ್ಥೆ ಜಾರಿ ಮತ್ತು ಭ್ರಷ್ಟಾಚಾರ ನಿಗ್ರಹದಲ್ಲಿ ಇದು ಅತ್ಯಂತ ಮಹತ್ವದ ನಿರ್ಧಾರ ಎಂದು ಹೊಗಳಿದ್ದರು. ಆದರೆ ಸರ್ಕಾರ 2000 ರು. ಮೌಲ್ಯದ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ ಬಳಿಕ ಅದನ್ನು ತೀವ್ರವಾಗಿ ವಿರೋಧಿಸಿದ್ದರು.

ಶಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ 72 ವರ್ಷದ ಥೇಲರ್ ಅವರು, ವ್ಯಕ್ತಿಗಳು ಅಥವಾ ಸಮೂಹಗಳು ಕೈಗೊಳ್ಳುವ ಆರ್ಥಿಕತೆ ಹಾಗೂ ಹಣಕಾಸು ಮಾರುಕಟ್ಟೆಗೆ ಸಂಬಂಧಿಸಿದ ನಿರ್ಧಾರಗಳಿಂದ ಮಾನಸಿಕ ಹಾಗೂ ಸಾಮಾಜಿಕ ಅಂಶಗಳ ಮೇಲಾಗುವ ಪರಿಣಾಮಗಳ ಕುರಿತಂತೆ ಸಂಶೋಧನೆ ನಡೆಸಿದ್ದಾರೆ.

ಅರ್ಥಶಾಸ್ತ್ರವನ್ನು ಮತ್ತಷ್ಟು ಮಾನವೀಯವಾಗಿಸಿದ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಅರ್ಥಶಾಸ್ತ್ರ ಹಾಗೂ ಮನಃಶಾಸ್ತ್ರವನ್ನು ವಿಲೀನಗೊಳಿಸಿದ ಮೊದಲಿಗ ಅವರಾಗಿದ್ದಾರೆ ಎಂದು ನೊಬೆಲ್ ಸಮಿತಿ ತಿಳಿಸಿದೆ. 7.2 ಕೋಟಿ ರು. ಮೊತ್ತದ ಬಹುಮಾನ ಮೊತ್ತ ಥೇಲರ್ ಅವರಿಗೆ ಲಭಿಸಲಿದೆ. ರಿಚರ್ಡ್ ಅವರ ವಾದ ಬಿಹೇವಿಯರಲ್ ಎಕನಾಮಿಕ್ಸ್ ಎಂದೇ ಪ್ರಸಿದ್ಧವಾಗಿದೆ

click me!