ಕೆಎಸ್'ಓಯು ಮಾನ್ಯತೆಗೆ ಆಗ್ರಹ

Published : Nov 01, 2017, 02:23 PM ISTUpdated : Apr 11, 2018, 12:37 PM IST
ಕೆಎಸ್'ಓಯು ಮಾನ್ಯತೆಗೆ ಆಗ್ರಹ

ಸಾರಾಂಶ

ಕೆಎಸ್‌'ಒಯು ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿ ಎರಡು ವರ್ಷ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲಿರಿಸಿದೆ ಎಂದು ದೂರಿದರು.

ಶಿವಮೊಗ್ಗ(ನ.01): ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌'ಒಯು) ಮಾನ್ಯತೆ ರದ್ದುಗೊಳಿಸಿರುವುದನ್ನು ಖಂಡಿಸಿ ಹಾಗೂ ಮರು ಮಾನ್ಯತೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರ ಹೊಣೆಯಾಗಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೆಎಸ್‌'ಒಯು ಮಾನ್ಯತೆಯನ್ನು ಯುಜಿಸಿ ರದ್ದುಗೊಳಿಸಿ ಎರಡು ವರ್ಷ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲಿರಿಸಿದೆ ಎಂದು ದೂರಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಕೆಎಸ್‌'ಒಯು ಅನುಕೂಲವಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಇದರಿಂದ ಭವಿಷ್ಯ ರೂಪಿಸಿಕೊಂಡಿದ್ದರು. ಕೆಲವು ಭ್ರಷ್ಟಾಚಾರಿಗಳ ಕಾರಣದಿಂದಾಗಿ ಮಾನ್ಯತೆಯನ್ನು ಕಳೆದುಕೊಂಡು ಪದವಿ ಪಡೆದ ಮತ್ತು ಪಡೆಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿರಿಸಿದೆ ಎಂದು ದೂರಿದರು. ಸಾಂಪ್ರದಾಯಿಕ ಪದವಿ ನೀಡಲು ಮಾತ್ರ ಮಾನ್ಯತೆ ಪಡೆದಿದ್ದ ಕೆಎಸ್‌'ಒಯು ಪ್ರಾಯೋಗಿಕ ತರಗತಿಗಳು ಕಡ್ಡಾಯವಾಗಿರುವ ತಾಂತ್ರಿಕ ಕೋರ್ಸ್‌ಗಳನ್ನು ಕೆಲವು ಸಂಸ್ಥೆಗಳ ಸಹಯೋಗದಲ್ಲಿ ಆರಂಭಿಸಿತ್ತು. ದೂರಶಿಕ್ಷಣ ಮಂಡಳಿ ಎಚ್ಚರಿಕೆಯನ್ನು ಲೆಕ್ಕಿಸದೇ ಪ್ಯಾರಮೆಡಿಕಲ್ ಕೋರ್ಸ್‌ಗಳು ಸೇರಿ ಸುಮಾರು 442 ವಿಷಯದಲ್ಲಿ ಸರ್ಟಿಫಿಕೇಟ್ ನೀಡುವ ಮೂಲಕ ವೈದ್ಯಕೀಯ ಶಿಕ್ಷಣ ಮಂಡಳಿಯ ನಿರ್ದೇಶನವನ್ನೂ ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಯುಜಿಸಿ ಇದನ್ನು ಗಂಭೀರವಾಗಿ ಪರಿಗಣಿಸಿ 2012-13ರ ನಂತರದ ಎಲ್ಲ ಕೋರ್ಸ್‌ಗಳ ಮಾನ್ಯತೆಯನ್ನು ರದ್ದುಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ದೂಡಿದೆ. ಕೆಎಸ್‌'ಒಯು ಮಾಡಿದ ತಪ್ಪಿಗಾಗಿ ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿಸುವ ಯುಜಿಸಿಯ ಈ ಕ್ರಮ ಉನ್ನತ ಶಿಕ್ಷಣ ಪಡೆಯುವ ಹಕ್ಕುಗಳನ್ನು ನಿರಾಕರಿಸುತ್ತಿದೆ ಎಂದು ಹೇಳಿದರು. ಈ ನಡುವೆ ಪದವಿ ಪಡೆದ ವಿದ್ಯಾರ್ಥಿಗಳು ನೆಟ್, ಸ್ಲೆಟ್, ಕೆಪಿಎಸ್‌ಸಿ ಅರ್ಹತೆ ಪಡೆದರೂ ಮಾನ್ಯತೆ ಕಳೆದುಕೊಂಡ ಪದವಿಗಳಿಂದಾಗಿ ಕೆಲಸ ಪಡೆಯುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳೇ ಹೊಣೆ ಎಂದರು. ಕೂಡಲೇ ಉಭಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಕೆಎಸ್‌ಒಯುಗೆ ಯುಜಿಸಿ ಮಾನ್ಯತೆಯನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಮಹಮ್ಮದ್ ದಸ್ತಗೀರ್, ಫಾರುಕ್, ಸುಹೇಲ್, ಜಮೀರ್ ಇತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!