
ಬಳ್ಳಾರಿ[ಜು.03]: ‘‘ನನ್ನ ರಾಜೀನಾಮೆ ಬ್ಲ್ಯಾಕ್‌ಮೇಲ್ ತಂತ್ರವಲ್ಲ, ನಾನು ಸರ್ಕಾರದ ಮುಂದೆ ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ’’ ಎಂದಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್, ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವ ಸರ್ಕಾರದ ಧೋರಣೆ ವಿರೋಧಿಸಿ ಹೋರಾಟ ಮುಂದುವರಿಸುವುದಾಗಿ ಮತ್ತೊಮ್ಮೆ ಘೋಷಿಸಿದ್ದಾರೆ.
ಹೊಸಪೇಟೆಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ನಾನು ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಳಿಲ್ಲ. ಸಚಿವ ಸ್ಥಾನದ ಬೇಡಿಕೆಯನ್ನೂ ಇಟ್ಟಿಲ್ಲ. ಜಿಂದಾಲ್‌ಗೆ ಭೂಮಿ ಪರಾಭಾರೆ ಮಾಡುವುದು ಸರಿಯಲ್ಲ. ಬೇಕಾದರೆ ಲೀಸ್ ಮುಂದುವರಿಸಲಿ ಎಂಬ ಒತ್ತಾಯ ನನ್ನದು. ಅದೇ ರೀತಿ ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬ ಬೇಡಿಕೆ ಇದೆ. ಇದು ಹೊಸ ಬೇಡಿಕೆಯಲ್ಲ. ಈ ಹಿಂದೆ ಕೂಡ ಅನೇಕ ಬಾರಿ ಈ ಸಂಬಂಧ ಧ್ವನಿ ಎತ್ತಿದ್ದೇನೆ ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದರು.
ನಾನು ಎಂದೂ ಸ್ವಾರ್ಥಪರ ಹೋರಾಟ ಮಾಡಿಲ್ಲ. ಮಾಡುವುದೂ ಇಲ್ಲ. ನನ್ನ ಹೋರಾಟ ಹಾಗೂ ರಾಜೀನಾಮೆ ಹಿಂದೆ ಜಿಲ್ಲೆಯ ಹಿತಾಸಕ್ತಿ ಇದೆಯೇ ಹೊರತು, ಬೇರೇನೂ ಇಲ್ಲ. ಯಾವುದೇ ಕಾರಣಕ್ಕೂ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಬಾರದುು, ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಜಿಂದಾಲ್ ಈವರೆಗೆ ಪಡೆದಿರುವ ಭೂಮಿ ಎಷ್ಟು? ಬಳಕೆಯಾಗಿರುವ ಭೂಮಿ ಎಷ್ಟುಎಂಬುದು ಬಹಿರಂಗವಾಗಬೇಕು. ಜಿಂದಾಲ್ ಸುತ್ತಮುತ್ತಲ ಪ್ರದೇಶಗಳ ಜನರ ಬಾಧೆ ಸರ್ಕಾರಕ್ಕೂ ಅರ್ಥವಾಗಬೇಕು ಎಂದರು.
ನಿಮ್ಮ ಮುಂದಿನ ನಡೆ ಏನು? ಎಂಬ ಪತಕರ್ತರ ಪ್ರಶ್ನೆಗೆ ‘ಕಾದು ನೋಡಿ’ ಎಂದಷ್ಟೇ ಶಾಸಕ ಆನಂದ ಸಿಂಗ್ ಉತ್ತರಿಸಿದರು.
ಬೆಂಬಲಿಗರ ಜತೆಗೆ ಚರ್ಚೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಆನಂದ್ ಸಿಂಗ್ ಅವರು ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರ ಜತೆ ಸಮಾಲೋಚನೆ ನಡೆಸಿದರು. ಈ ವೇಳೆ ಬೆಂಬಲಿಗರು ದಿಢೀರ್ ರಾಜೀನಾಮೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದರು. ಜತೆಗೆ, ಮುಂದಿನ ನಡೆ ಕುರಿತೂ ಚರ್ಚೆ ನಡೆಸಿದರು ಎನ್ನಲಾಗಿದೆ.
ಆನಂದ್ ಸಿಂಗ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ
ಜಿಂದಾಲ್‌ಗೆ ಭೂಮಿ ಪರಾಭಾರೆ ನಿರ್ಧಾರ ವಿರೋಧಿಸಿ ಹೋರಾಟಕ್ಕಿಳಿದು ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಆನಂದ್‌ಸಿಂಗ್ ಅವರ ನಿಲುವು ಸ್ವಾಗತಿಸಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಜಿಲ್ಲೆಯ ಹಿತದೃಷ್ಟಿಯಿಂದ ಆನಂದ್‌ಸಿಂಗ್ ತೆಗೆದುಕೊಂಡಿರುವ ನಡೆಯನ್ನು ಸ್ವಾಗತಿಸಿ ಸಿಂಗ್ ಬೆಂಬಲಿಗರು ಸಾಮಾಜಿಕ ತಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹರಿಬಿಟ್ಟಿದ್ದು, ಇದಕ್ಕೆ ಬೆಂಬಲ ವ್ಯಕ್ತವಾಗಿದೆ. ಜಿಂದಾಲ್‌ಗೆ ಭೂಮಿ ನೀಡಿಕೆ ಸರಿಯಾದ ಕ್ರಮವಲ್ಲ. ಲೀಸ್‌ನ್ನೇ ಮುಂದುವರಿಸಬೇಕು. ವಿಜಯನಗರ ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂಬ ಬೇಡಿಕೆ ಜನಪರವಾಗಿಯೇ ಇದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.