ಸಿಎಂ ಕುಟುಂಬದ ವಿರುದ್ಧ ಎದುರಾಯ್ತು ಗಂಭೀರ ಆರೋಪ?

By Web DeskFirst Published Dec 6, 2018, 12:00 PM IST
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಇದೀಗ ಭಾರೀ ಆರೋಪ ಒಂದು ಎದುರಾಗಿದೆ. ಕೊಟ್ಯಂತರ ರು. ಮೌಲ್ಯದ ಅರಣ್ಯ ಭೂಮಿ ಕಬಳಿಸಿದ್ದಾರೆ ಎಂದು ದೂರಲಾಗಿದೆ. 

 

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧ ಮೀಸಲು ಅರಣ್ಯ ಭೂಮಿ ಕಬಳಿಕೆ ಆರೋಪ ಕೇಳಿ ಬಂದಿದ್ದು, ಕೋಟ್ಯಾಂತರ ರೂ. ಮೌಲ್ಯದ ಅರಣ್ಯ ಭೂಮಿ ಕಬಳಿಸಿದ್ದಾರೆ ಎನ್ನಲಾಗಿದೆ. 

ಸಿಎಂ ಸಹೋದರ ಎಚ್.ಡಿ.ಬಾಲಕೃಷ್ಣ ಅವರ ಪತ್ನಿ ಸಂಬಂಧಿಕರಿಂದ ಭೂ ಕಬಳಿಕೆ ನಡೆದಿದೆ ಎಂದು, ಮಂಡ್ಯದ ಆರ್ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದ ಗಣಂಗೂರು ಗ್ರಾಮದ ವ್ಯಾಪ್ತಿಯ 70 ಎಕರೆಗೂ ಹೆಚ್ಚು ಭೂಮಿ ಕಬಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗಣಂಗೂರು ಸರ್ವೆ ನಂ.24, 30, 31, 32, 34 ರ ಭೂಮಿ ಕಬಳಿಸಲಾಗಿದೆ. ಕಡಿಮೆ ದರಕ್ಕೆ ಸುಮಾರು 30ಎಕರೆ ಖರೀದಿಸುವಂತೆ ದಾಖಲೆ ಸೃಷ್ಟಿಸಿ, ಸಿಎಂ ಸಂಬಂಧಿಕರ ಹೆಸರಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು  ದಾಖಲೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. 

ಕಬಳಿಕೆ ಮಾಡಿಕೊಂಡಿರುವ ಜಮೀನನ್ನು ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ಬಾಡಿಗೆ ನೀಡಿದ್ದು, ಈ ಸಂಸ್ಥೆ ಮರಗಿಡಗಳನ್ನು ನಾಶ ಮಾಡಿ ಮತ್ತಷ್ಟು ಭೂಮಿಯನ್ನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ  ತಮ್ಮ ಸಂಬಂಧಿಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಂಗೆ ದೂರು ನೀಡಲಾಗಿದೆ. 

ಡಿ.7ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪಾಂಡವಪುರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಖುದ್ದು ಸ್ಥಳ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರವೀಂದ್ರ ಅವರು ಆಗ್ರಹಿಸಿದ್ದಾರೆ.

click me!