ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ್ : ಮಿತ್ರರ ನೆರವು ಅಗತ್ಯ

Published : Oct 05, 2018, 07:43 AM IST
ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ್ : ಮಿತ್ರರ ನೆರವು ಅಗತ್ಯ

ಸಾರಾಂಶ

ದೇಶದಲ್ಲಿ ಸದ್ಯ ಚುನಾವಣೆ  ನಡೆದರೆ ಮತ್ತೆ ಬಿಜೆಪಿ ಮಿತ್ರರ ನೆರವಿನಿಂದ ಅಧಿಕಾರವನ್ನು ಪಡೆಯಲಿದೆ ಎಂದು ‘ರಿಪಬ್ಲಿಕ್‌ ಟೀವಿ-ಸಿ ವೋಟರ್‌’ ಮತದಾರರ ಸಮೀಕ್ಷೆ ಹೇಳಿದೆ.

ನವದೆಹಲಿ :  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ದೇಶದಲ್ಲಿ ಈಗ ಚುನಾವಣೆ ನಡೆದರೆ ‘ಮೋದಿ ಅಲೆ’ಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಗಳಿಸಲಿದೆ ಎಂದು ‘ಕನ್ನಡಪ್ರಭ’ದ ಸೋದರ ಸಂಸ್ಥೆಯಾದ ‘ರಿಪಬ್ಲಿಕ್‌ ಟೀವಿ-ಸಿ ವೋಟರ್‌’ ಮತದಾರರ ಸಮೀಕ್ಷೆ ಹೇಳಿದೆ.

ಬಿಜೆಪಿ ಒಳಗೊಂಡ ಎನ್‌ಡಿಎ 276, ಕಾಂಗ್ರೆಸ್‌ ನೇತೃತ್ವದ ಯುಪಿಎ 112 ಸ್ಥಾನ ಪಡೆಯಲಿದ್ದರೆ, ಇತರರು 155 ಸ್ಥಾನಗಳನ್ನು ಗಳಿಸಲಿದ್ದಾರೆ. ಕಳೆದ ಸಲಕ್ಕಿಂತ ಎನ್‌ಡಿಎ ಬಲ 60 ಸ್ಥಾನದಷ್ಟುಕುಸಿಯಲಿದ್ದರೂ, ಕೂದಲೆಳೆ ಅಂತರದಲ್ಲಿ ಬಹುಮತ ಗಳಿಸುವಲ್ಲಿ ಅದು ಯಶಸ್ವಿಯಾಗಲಿದೆ ಎಂದು ಭವಿಷ್ಯ ಹೇಳಲಾಗಿದೆ.

ಆದರೆ ಏಕಾಂಗಿಯಾಗಿ 282 ಸ್ಥಾನ ಗಳಿಸಿ ಬಹುಮತದ ಗೆರೆ ದಾಟಿದ್ದ ಬಿಜೆಪಿಗೆ ಈಗ ‘ಏಕಾಂಗಿ ಅಧಿಕಾರ ಭಾಗ್ಯ’ ಸಾಧ್ಯವಾಗಲಿಕ್ಕಿಲ್ಲ. ಈ ಸಲ ಬಿಜೆಪಿ ಸ್ವಂತ ಬಲದಿಂದ 248 ಸ್ಥಾನ ಮಾತ್ರ ಪಡೆಯಲಿದೆ. ಅಧಿಕಾರಕ್ಕಾಗಿ ಅದು ಎನ್‌ಡಿಎ ಮಿತ್ರರ ಸಹಾಯ ಪಡೆಯಲೇಬೇಕು ಎಂದು ಸಮೀಕ್ಷೆಯು ಸಂದೇಶ ರವಾನಿಸಿದೆ.

ಇದೇ ವೇಳೆ, ಕಾಂಗ್ರೆಸ್‌ ನೇತೃತ್ವದ ಯುಪಿಎ ಬಲ 59ರಿಂದ 112ಕ್ಕೆ ವರ್ಧಿಸಲಿದೆ. ಕಾಂಗ್ರೆಸ್‌ ಏಕಾಂಗಿಯಾಗಿ ತನ್ನ ಬಲವನ್ನು 44ರಿಂದ 100ಕ್ಕೆ ಹೆಚ್ಚಿಸಿಕೊಳ್ಳಲಿದೆ. ಇತರರು ತಮ್ಮ ಬಲವನ್ನು 2014ರ 148ರಿಂದ 155ಕ್ಕೆ ವೃದ್ಧಿಸಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ. ಆದಾಗ್ಯೂ ಅವುಗಳು ಅಧಿಕಾರದಿಂದ ಗಾವುದ ದೂರ ಉಳಿಯುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.

ಇನ್ನು ಶೇಕಡವಾರು ಮತ ಗಳಿಕೆಯಲ್ಲಿ ಎನ್‌ಡಿಎ ಶೇ.38, ಯುಪಿಎ ಶೇ.25 ಹಾಗೂ ಇತರರು ಶೇ.37 ಮತ ಪಡೆಯಲಿದ್ದಾರೆ.

ಬಿಜೆಪಿಗೆ ಉ.ಪ್ರ. ಹಿನ್ನಡೆಯೇ ಮಾರಕ?:  ಉತ್ತರಪ್ರದೇಶದಲ್ಲಿ ಬಿಎಸ್‌ಪಿ-ಸಮಾಜವಾದಿ ಪಾರ್ಟಿ ಮಹಾಮೈತ್ರಿಕೂಟ ಏರ್ಪಟ್ಟರೆ ಬಿಜೆಪಿಗೆ ಕೇವಲ 36 ಸ್ಥಾನ ಬರಲಿದೆ. ಮಹಾಮೈತ್ರಿಕೂಟಕ್ಕೆ 42 ಸ್ಥಾನ ಪ್ರಾಪ್ತಿಯಾಗಲಿದೆ. ಇದು ಬಿಜೆಪಿಗೆ ದೇಶದ ಅತಿದೊಡ್ಡ ರಾಜ್ಯದಲ್ಲಿ ಎಚ್ಚರಿಕೆಯ ಗಂಟೆ ಎಂದು ಸಮೀಕ್ಷೆ ಹೇಳಿದೆ. ಉತ್ತರಪ್ರದೇಶದಲ್ಲಿ 2014ರಲ್ಲಿ ಬಿಜೆಪಿ 80 ಸ್ಥಾನಗಳ ಪೈಕಿ 71 ಸ್ಥಾನ ಪಡೆದಿತ್ತು. ಆದರೆ ಮಾಯಾ-ಅಖಿಲೇಶ್‌ ಮೋಡಿಯು ಮೋದಿ ಪಕ್ಷಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದ್ದು, ಬಿಜೆಪಿಯ ಒಟ್ಟಾರೆ ರಾಷ್ಟ್ರೀಯ ಸಾಧನೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಇನ್ನು ಪ.ಬಂಗಾಳದಲ್ಲಿ ಭಾರಿ ಹವಾ ಎಬ್ಬಿಸಿರುವ ಬಿಜೆಪಿ ಕೇವಲ 1 ಸ್ಥಾನ ಪಡೆಯಲಿದೆ ಎಂದೂ ಹೇಳಲಾಗಿದೆ. ಇನ್ನುಳಿದಂತೆ ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ತನ್ನ ಭದ್ರಕೋಟೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ. ಕರ್ನಾಟಕ ಹೊರತುಪಡಿಸಿದರೆ ದಕ್ಷಿಣ ರಾಜ್ಯಗಳಲ್ಲಿ ಎಂದಿನಂತೆ ಬಿಜೆಪಿ ಮಂಕಾಗಿರಲಿದೆ ಎಂದು ಸಮೀಕ್ಷೆ ಸುಳುಹು ನೀಡಿದೆ.

ಎನ್‌ಡಿಎ 276 ಯುಪಿಎ 112 ಇತರರು 155

ರಿಪಬ್ಲಿಕ್‌ ಟೀವಿ, ಸಿ-ವೋಟರ್‌ ಮತದಾರರ ಸಮೀಕ್ಷೆ ಪ್ರಕಟ

ಈಗ ಚುನಾವಣೆ ನಡೆದರೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ

ಮಿತ್ರರ ನೆರವಿಂದ ಬಿಜೆಪಿಗೆ ಸರಳ ಬಹುಮತ

ಕಾಂಗ್ರೆಸ್‌ ನೇತೃತ್ವದ ಯುಪಿಎ ಬಲ ‘ಇತರೆ’ ಪಕ್ಷಗಳಿಗಿಂತ ಕಡಿಮೆ

ರಾಹುಲ್‌ ಪ್ರಧಾನಿ ಕನಸು ಕ್ಷೀಣ

ಲೋಕಸಭೆ ಬಲಾಬಲ 543 (ಬಹುಮತಕ್ಕೆ 272)

ಮೈತ್ರಿಕೂಟ    ಈಗ    2014    ಏರಿಳಿತ

ಎನ್‌ಡಿಎ    276    336    ​-60

ಯುಪಿಎ    112    59    +52

ಇತರೆ    155    148    +8

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!