
ಬೆಂಗಳೂರು (ಸೆ.11): ಜಮೀನು ಖರೀದಿ ವಿವಾದ ಗುರಿಯಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ನಿವೃತ್ತಿಗೆ ಕೇವಲ 18 ದಿನಗಳು ಬಾಕಿ ಇದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭೂ ವಿವಾದದ ತನಿಖೆಗೆ ಆದೇಶಿಸಿದ್ದರೂ ಈ ತನಕ ವರದಿ ಬಂದಿಲ್ಲ. ಹೀಗಾಗಿ ಸಿಎಸ್ ಜಾಧವ್ ಅಧಿಕಾರದಿಂದ ಸರಾಗವಾಗಿ ನಿರ್ಗಮಿಸುವ ಲಕ್ಷಣಗಳು ಗೋಚರಿಸಿವೆ.
ಆನೇಕಲ್ ಬಳಿ 8.3 ಎಕರೆ ಜಮೀನನ್ನು ತಮ್ಮ ತಾಯಿಯ ಹೆಸರಿನಲ್ಲಿ ಖರೀದಿಸಿದ ಬಳಿಕ ಅದರ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಿಎಸ್ ಜಾಧವ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಕೆಲ ಆರ್‌ಟಿಐ ಕಾರ್ಯಕರ್ತರು ಜಾಧವ್ ವಿರುದ್ಧ ರಾಜ್ಯಪಾಲರು, ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಸಂಸ್ಥೆಗಳಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಸಾರ್ವಜನಿಕವಾಗಿ ವ್ಯಾಪಕ ಟೀಕೆ ಕೇಳಿಬಂದಿದ್ದರಿಂದ ಸಿಎಂ ಸಿದ್ದರಾಮಯ್ಯ ಆಗಸ್ಟ್ 24ರಂದು ಇಲಾಖೆ ತನಿಖೆಗೆ ಆದೇಶ ನೀಡಿದ್ದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಅವರಿಂದ ತನಿಖೆ ನಡೆಸುವಂತೆ ಸೂಚಿಸಿದ್ದರು.
ಸಿಎಂ ಆದೇಶದ ಹಿನ್ನೆಲೆಯಲ್ಲಿ ಆನೇಕಲ್ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ವಿ.ಶಂಕರ್ ಪ್ರಕರಣದ ಕುರಿತಂತೆ ತನಿಖೆ ನಡೆಸಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದರು. ಇದೇ ವೇಗದಲ್ಲಿ ರಮಣರೆಡ್ಡಿ ಕೂಡ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಪ್ರಕರಣದ ಬಗ್ಗೆ ಸರ್ಕಾರದ ಅಡ್ವೋಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಕೇಳಿದ್ದರು. ಆದರೆ ಎಜಿ ಅವರು ಕಾನೂನು ಸಲಹೆಯನ್ನೂ ನೀಡಿಲ್ಲ. ಹಾಗೆಯೇ ರಮಣ ರೆಡ್ಡಿ ಕೂಡ ಈತನಕ ವರದಿ ಸಲ್ಲಿಸಿಲ್ಲ. ಸಿಎಸ್ ಜಾಧವ್ ಸೆ.30ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದು, ಅಷ್ಟರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿಯೇ ಎಂಬುದು ಕುತೂಹಲ ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.