
ಮುಂಬೈ(ಜು.09): ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ಪರ ಘೋಷಣೆ ಕೇಳಿ ಬಂದಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನೆ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಬೆಂಬಲಿಗರಿಂದಲೇ ಪತನವಾದಂತೆ ಪ್ರಧಾನಿ ಮೋದಿ ಕೂಡ ತಮ್ಮ ಭಕ್ತ (ಬೆಂಬಲಿಗ)ರಿಂದಲೇ ಪತನವಾಗಲಿದ್ದಾರೆ ಎಂದು ಹೇಳಿದೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್ ಮುಂಗ್ಟಿವಾರ್ ಜಿಎಸ್ಟಿಯ ಮೊದಲ ಭಾಗವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಪೊರೇಟರ್‍ಗಳು ಮೋದಿ ಪರ ಘೋಷಣೆ ಕೂಗಿದ್ದರು. ಇವತ್ತು ಅನಗತ್ಯವಾಗಿ ಮೋದಿ ಪರ ಘೋಷಣೆ ಕೂಗುತ್ತಿರುವವರು ಮೋದಿಯವರ ವ್ಯಕ್ತಿತ್ವಕ್ಕೆ ಚ್ಯುತಿಯನ್ನುಂಟು ಮಾಡುತ್ತಿದ್ದಾರೆ. ಅದೊಂದು ಕಾಲವಿತ್ತು ಇಂದಿರಾ ಗಾಂಧಿ ಪರವೂ ಅವರ ಬೆಂಬಲಿಗರು ಇದೇ ರೀತಿಯ ಘೋಷಣೆ ಕೂಗುತ್ತಿದ್ದರು. ಆಕೆಯ ಬೆಂಬಲಿಗರು ಇಂದಿರಾ ಎಂದರೆ ಇಂಡಿಯಾ ಎಂದು ಕೂಗಿ ದೇಶವನ್ನು ಅವಮಾನಿಸಿದ್ದರು. ಆ ರೀತಿಯ ಬೆಂಬಲವೇ ಆಕೆಯನ್ನು ಸೋಲುವಂತೆ ಮಾಡಿತು.
ನರೇಂದ್ರ ಮೋದಿಯವರ ಬಗ್ಗೆ ಅಭಿಮಾನ ಹೊಂದುವುದು ಬೇರೆ ಅವರ ಬಗ್ಗೆ ಉನ್ಮಾದದಿಂದ ಪ್ರತಿಕ್ರಿಯಿಸುವುದು ಬೇರೆಯಿರುತ್ತದೆ. ಸತ್ಯ ಏನೆಂದರೆ ಇಂದಿರಾ ಗಾಂಧಿ ಅವರು 1971ರಲ್ಲಿ ಪಾಕಿಸ್ತಾನದ ವಿರುದ್ದ ಯುದ್ಧವನ್ನು ಮಾತ್ರ ಗೆದ್ದಿರಲಿಲ್ಲ ಅವರು ಪಾಕಿಸ್ತಾನವೇ ಮಂಡಿಯೂರುವಂತೆ ಮಾಡಿದರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಾವು ಹೇಳುವುದಿಷ್ಟೇ,ಇಂದಿರಾ ಗಾಂಧಿ ಬಗ್ಗೆ ಅವರ ಬೆಂಬಲಿಗರಿಗಿದ್ದ ಅತಿಯಾದ ಭಕ್ತಿಯೇ ಇಂದಿರಾ ಸೋಲಿಗೆ ಕಾರಣವಾಯಿತು.
ಮೋದಿಯ ವಿರುದ್ಧ ಜಗತ್ತೇ ತಿರುಗಿ ನಿಂತಿದ್ದಾಗ, ಶಿವಸೇನೆ ಅವರ ಜತೆಗೆ ನಿಂತಿತ್ತು. ಈಗ ಮೋದಿ ಪರ ಘೋಷಣೆ ಕೂಗುವವರೆಲ್ಲಾ ಭಯದಿಂದ ಮೌನವಾಗಿದ್ದರು. ನಮ್ಮ ಸ್ನೇಹಿತರು (ಬಿಜೆಪಿ), ತಮ್ಮ ಭಕ್ತರ ಬಗ್ಗೆ ಎಚ್ಚರದಿಂದಿರಬೇಕು ಎಂದು ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದಿದೆ. ಬಿಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಶಿವಸೇನೆ, ಬಿಜೆಪಿಯ ಹಲವು ಮುಖಂಡರು ಭಾಗಿಯಾಗಿದ್ದರು.
ನಡೆದದ್ದೇನು?
ಮುಂಗ್ಟಿವಾರ್ ಅವರು ಚೆಕ್ ಹಸ್ತಾಂತರಿಸುವ ವೇಳೆ ಕೆಲವು ಬಿಜೆಪಿ ಕಾರ್ಪೊರೇಟರ್‍ಗಳು ಮತ್ತು ಕಾರ್ಯಕರ್ತರು 'ಮೋದಿ ಮೋದಿ' ಎಂದು ಜಪಿಸಿದಾಗ ಬಿಎಂಸಿಯಲ್ಲಿ ಆಡಳಿತಾರೂಢ ಶಿವಸೇನೆ ಕಾರ್ಯಕರ್ತರು ಇದಕ್ಕೆ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ವೇಳೆ ನಡೆದ ವಾಕ್ಸಮರದಲ್ಲಿ ಶಿವಸೇನೆ ಕಾರ್ಯಕರ್ತರು ಬಿಜೆಪಿ ಕಾರ್ಪೊರೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿ ಮೋದಿ ಜಪ ಮಾಡುವ ಅಗತ್ಯವೇನಿತ್ತು? ಮುಖ್ಯಮಂತ್ರಿ ಮತ್ತು ಬಿಜೆಪಿ ಅಧ್ಯಕ್ಷರು ಸ್ವಯಂ ವಿಮರ್ಶೆ ಮಾಡಿಕೊಳ್ಳಲಿ. ಈ ಜಿಎಸ್‍ಟಿ ಹಣ ಬಿಜೆಪಿ ಖಜಾನೆಯಿಂದಾಗಲೀ, ಸೇನೆಯ ಖಜಾನೆಯಿಂದಾಗಲೀ ಬಂದಿಲ್ಲ. ಈ ಹಣವನ್ನು ಮುಂಬೈಯ ಅಭಿವೃದ್ದಿಗಾಗಿ ಬಳಸಲಾಗುವುದು ಎಂದು ಸೇನೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.