
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸಚಿವೆ ಉಮಾಶ್ರೀ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನಿರ್ಧರಿಸಿದ್ದಾರೆಂಬ ಸುದ್ದಿ ದೆಹಲಿ ರಾಜಕೀಯ ವಲಯದಲ್ಲಿ ನಿಚ್ಚಳವಾಗಿದೆ. ನಿನ್ನೆ ದೆಹಲಿಗೆ ಬಂದಾಗ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ಪಿಯೂಷ್ ಗೋಯಲ್ ಎದುರು ಯಡಿಯೂರಪ್ಪ ತೇರದಾಳದಿಂದ ಚುನಾವಣೆಗೆ ಸ್ಪರ್ಧಿಸುವ ವಿಷಯ ಹೇಳಿದ್ದು, ಅದು ಲಿಂಗಾಯತರು ಮತ್ತು ನೇಕಾರರು ಜಾಸ್ತಿ ಇರುವ ಕ್ಷೇತ್ರ, ಹೀಗಾಗಿ ನನಗೆ ಸುಲಭವಾಗಲಿದೆ ಎಂದು ಕೂಡ ಹೇಳಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳವರೆಗೂ ಯಡಿಯೂರಪ್ಪಗೆ ತಾನು ಶಿಕಾರಿಪುರದಿಂದ ಸ್ಪರ್ಧಿಸಿ ಪುತ್ರ ರಾಘವೇಂದ್ರ ಅವರನ್ನು ರಾಣೆಬೆನ್ನೂರಿನಿಂದ ಕಣಕ್ಕಿಳಿಸಬೇಕು ಎಂದು ಮನಸ್ಸಿನಲ್ಲಿ ಇತ್ತಾದರೂ ಹೈಕಮಾಂಡ್ ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಯಲ್ಲಿ ಸ್ಪರ್ಧಿಸಿದರೆ ಅನುಕೂಲ. ಒಂದು ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದರಿಂದ ಯಡಿಯೂರಪ್ಪನವರು ತೇರದಾಳ ಕ್ಷೇತ್ರ ಆಯ್ದುಕೊಂಡಿದ್ದಾರೆ. ಯಡಿಯೂರಪ್ಪ ಅಲ್ಲಿನ ಮಾಜಿ ಶಾಸಕ ಸಿದ್ದು ಸವದಿ ಅವರನ್ನು ಕೂಡ ಕರೆಸಿಕೊಂಡು ನಿಮಗೆ ವಿಧಾನಪರಿಷತ್ ಟಿಕೆಟ್ ಕೊಡುತ್ತೇವೆ ಎಂದು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ. ಜಮಖಂಡಿಗೆ ಹತ್ತಿಕೊಂಡು ಇರುವ ತೇರದಾಳ ರಬಕವಿ, ಬನಹಟ್ಟಿಗಳನ್ನೊಳಗೊಂಡಿರುವ ಕ್ಷೇತ್ರದಲ್ಲಿ ನೇಕಾರರ ಸಂಖ್ಯೆ ಜಾಸ್ತಿ ಇರುವುದರಿಂದಲೇ 2008ರಲ್ಲಿ ಉಮಾಶ್ರೀ ಇಲ್ಲಿಗೆ ಬಂದು ಚುನಾವಣೆಗೆ ನಿಂತು, ಒಮ್ಮೆ ಸೋತು 2013ರಲ್ಲಿ ಗೆದ್ದಿದ್ದರು.
ಸಿದ್ಧಗಂಗಾ ಮಠದಿಂದ ಪರಿವರ್ತನೆ?
ನವೆಂಬರ್'ನಲ್ಲಿ ಪ್ರಾರಂಭವಾಗಲಿರುವ ಪರಿವರ್ತನಾ ಯಾತ್ರೆಯನ್ನು ತುಮಕೂರಿನ ಸಿದ್ಧಗಂಗಾ ಮಠದಿಂದ ಆರಂಭಿಸಲು ಯಡಿಯೂರಪ್ಪ ಯೋಚಿಸುತ್ತಿದ್ದು, ದೆಹಲಿಯಲ್ಲಿ ಭಾನುವಾರ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ. ಸಿದ್ದರಾಮಯ್ಯ ಲಿಂಗಾಯತ- ವೀರಶೈವ ದಾಳವನ್ನು ಎಸೆದಿರುವುದರಿಂದ ದ್ವಂದ್ವದಲ್ಲಿರುವ ಲಿಂಗಾಯತ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಯಾತ್ರೆ ಹೊರಟರೆ ಸಮುದಾಯಕ್ಕೆ ಹೋಗಬೇಕಾದ ಸಂದೇಶ ಹೋಗುತ್ತದೆ ಎಂಬುದು ಯಡಿಯೂರಪ್ಪ ಮನಸ್ಸಿನಲ್ಲಿದೆ. ಆದರೆ, ಶಾ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.