JDS ನಾಯಕರ ವಿರುದ್ಧ ಶಾಸಕರ ಸಿಟ್ಟಿಗೆ ಕಾರಣವೇನು?

By Web DeskFirst Published Jul 8, 2019, 8:03 AM IST
Highlights

ಶಾಸಕರ ರಾಜೀನಾಮೆ ಬೆಳವಣಿಗೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧದ ಅಸಮಾಧಾನ. ಅಸಮಾಧಾನಕ್ಕೆ ಕಾರಣವೇನು..?

ಬೆಂಗಳೂರು [ಜು.08] : ಆಡಳಿತಾರೂಢ ಶಾಸಕರ ರಾಜೀನಾಮೆ ಬೆಳವಣಿಗೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ವಿರುದ್ಧದ ಅಸಮಾಧಾನ. ಒಂದಲ್ಲ ಒಂದು ರೀತಿಯಲ್ಲಿ
ಗೌಡರ ಕುಟುಂಬದ ವಿರುದ್ಧ ವ್ಯಾಪಕ ಅತೃಪ್ತಿ ಹೊಗೆಯಾಡತೊಡಗಿದೆ. ಇದು ಕೇವಲ ಕಾಂಗ್ರೆಸ್ ಶಾಸಕರ ಅಸಮಾಧಾನವಷ್ಟೇ ಅಲ್ಲ. ಜೆಡಿಎಸ್ ಶಾಸಕರಲ್ಲೂ ಗೌಡರ ಕುಟುಂಬದ ಬಗ್ಗೆ ಬೇಸರ ಕಾಣಿಸಿಕೊಂಡಿದೆ. 

1 ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮಿತ್ರ
ಪಕ್ಷವಾಗಿದ್ದರೂ ಕಾಂಗ್ರೆಸ್ಸಿನ ಕ್ಷೇತ್ರಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನಿರಾಯಾಸವಾಗಿ ಹರಿದು ಬರುವಂತೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹರಿದು ಬರುವುದಿಲ್ಲ ಎಂಬ ಬೇಸರವಿದೆ.

2 ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲಿ ಆಯಾ ಶಾಸಕರು ಹೇಳುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡಲಾಗುತ್ತದೆ. ಅಲ್ಲಿ ಕಾಂಗ್ರೆಸ್ ಮುಖಂಡರ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಆದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೂ ಜೆಡಿಎಸ್ ಮುಖಂಡರು ಮೂಗು ತೂರಿಸುತ್ತಾರೆ. ಅವರು ಹೇಳಿದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗುತ್ತದೆ.

3 ರಾಜಧಾನಿ ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಕಾಂಗ್ರೆಸ್ ಶಾಸಕರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಕಾಂಗ್ರೆಸ್ಸಿನ ಉಪಮುಖ್ಯಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿದ್ದರೂ ಅಲ್ಲಿ ಅವರಿಗೆ ಹೆಚ್ಚಿನ ಅಧಿಕಾರವಿಲ್ಲ. ಪ್ರಮುಖ ಯೋಜನೆಗಳಲ್ಲಿ ಅವರನ್ನು ಮೀರಿ ನಿರ್ಣಯ ಕೈಗೊಳ್ಳಲಾಗುತ್ತದೆ.

4 ಹಲವು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ ಅಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಚೇರಿ ಅಥವಾ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ
ಅವರು ಸೂಚಿಸಿದ ಅಧಿಕಾರಿಗಳನ್ನೇ ವರ್ಗಾಯಿಸಲಾಗುತ್ತದೆ.

5 ವಿಶೇಷವಾಗಿ ಲೋಕೋಪಯೋಗಿ ಸಚಿವ ರೇವಣ್ಣ ಅವರು ತಮಗೆ ಸಂಬಂಧ ಇಲ್ಲದಿದ್ದರೂ ಇತರ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರಿಗಳಿಗೆ ಸೂಚನೆ ಕೊಡಿಸುವ ಮೂಲಕ ಮಧ್ಯೆ ಪ್ರವೇಶ ಮಾಡುತ್ತಾರೆ. ಇದರಿಂದಾಗಿ ಇತರ
ಇಲಾಖೆಗಳ ಸಚಿವರಿಗೂ ಕೆಲಸ ಮಾಡುವುದು ದುಸ್ತರವಾಗಿದೆ.

6 ದೇವೇಗೌಡರ ಕುಟುಂಬದ ಇತರ ಸದಸ್ಯರು ವರ್ಗಾವಣೆ ಮತ್ತಿತರ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಮೂಗು ತೂರಿಸುತ್ತಾರೆ. ಇಂಥವರನ್ನೇ ನೇಮಕ ಮಾಡಬೇಕು ಎಂಬ ಕಟ್ಟಪ್ಪಣೆ ವಿಧಿಸುತ್ತಾರೆ. ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ.

7 ಸರ್ಕಾರದ ಪ್ರಮುಖ ಯೋಜನೆಗಳ ಯಶಸ್ಸಿನ ಪಾಲು ಕಾಂಗ್ರೆಸ್ ಪಕ್ಷಕ್ಕೆ ಸಮರ್ಪಕವಾಗಿ ಲಭಿಸುತ್ತಿಲ್ಲ. ಎಲ್ಲವನ್ನೂ ತಮ್ಮ ಜೆಡಿಎಸ್ ಪಕ್ಷದ ಯೋಜನೆಗಳಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಇತರ ಸಚಿವರು ಬಿಂಬಿಸುತ್ತಾರೆ.


1ವರ್ಗಾವಣೆ ಮತ್ತಿತರ ವಿಚಾರಗಳಲ್ಲಿ ದೇವೇಗೌಡ ಕುಟುಂಬದ ಹಸ್ತಕ್ಷೇಪ ಹೆಚ್ಚು

2 ಜೆಡಿಎಸ್ ಶಾಸಕರಿಗೆ ಕುಮಾರಸ್ವಾಮಿ ಆದ್ಯತೆ, ಕಾಂಗ್ರೆಸ್‌ನವರ ಬಗ್ಗೆ ಕ್ಯಾರೇ ಇಲ್ಲ

3 ಬೆಂಗಳೂರಿನ ಯೋಜನೆಗಳಲ್ಲಿ ಕಾಂಗ್ರೆಸ್ ಶಾಸಕರ ಮಾತಿಗೆ ಬೆಲೆ ಇಲ್ಲದಂತಾಗಿದೆ

4 ನಿಗಮ, ಮಂಡಳಿ ಸಿಕ್ಕರೂ ಅಧಿಕಾರಿಗಳ ನೇಮಕದಲ್ಲಿ ಎಚ್‌ಡಿಕೆ, ರೇವಣ್ಣ ಫೈನಲ್

5 ಸಂಬಂಧ ಇಲ್ಲದ ಇಲಾಖೆಗಳಲ್ಲೂ ಪಿಡಬ್ಲ್ಯುಡಿ ಸಚಿವ ರೇವಣ್ಣ ಹಸ್ತಕ್ಷೇಪ

click me!