ರತ್ನಪ್ರಭಾ ಸೇವಾವಧಿ ವಿಸ್ತರಣೆಯ ಅಸಲಿ ಕಹಾನಿ ಏನು?

By nikhil vkFirst Published Jun 22, 2018, 12:36 PM IST
Highlights

ರತ್ನಪ್ರಭಾ ಸೇವಾವಧಿ ವಿಸ್ತರಣೆಯ ಅಸಲಿ ಕಹಾನಿ ಏನು?

ವಿಸ್ತರಣೆ ಕ್ರೆಡಿಟ್‌ಗಾಗಿ ರೇಸ್‌ಗೆ ಬಿದ್ದಿರುವ ಸಿಎಂ ಡಿಸಿಎಂ

ದಲಿತ ಟ್ರಂಪ್ ಕಾರ್ಡ್ ಲಾಭಕ್ಕಾಗಿ ಗುದ್ದಾಟ?

ಗೊಂದಲ ಮೂಡಿಸಿದ ಸಿಎಂ, ಡಿಸಿಎಂ ಹೇಳಿಕೆ

ಬೆಂಗಳೂರು(ಜೂ.22): ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವಾವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅವರು ಈಗಾಗಲೇ 3 ತಿಂಗಳ ವಿಸ್ತರಣಾವಧಿ ಸೇವೆಯಲ್ಲಿದ್ದಾರೆ.

ರತ್ನಪ್ರಭಾ ಅವರ ಅವರ ಸೇವಾವಧಿ ಜೂನ್ 30ಕ್ಕೆ ಮುಕ್ತಾಯವಾಗಬೇಕಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೆ ಮೂರು ತಿಂಗಳ ಅವಧಿಗೆ ಅವರ ಸೇವಾವಧಿಯನ್ನು ವಿಸ್ತರಿಸಿದೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಲವು ಕೆಲಸಗಳಲ್ಲಿ ನಿರತರಾಗಿರುವುದರಿಂದ ಮತ್ತು ಬಜೆಟ್ ತಯಾರಿ ನಡೆಸುತ್ತಿರುವುದರಿಂದ ಮುಖ್ಯ ಕಾರ್ಯದರ್ಶಿಗಳ ಸೇವಾವಧಿಯನ್ನು ವಿಸ್ತರಿಸಲಾಗಿದೆ ಎನ್ನಲಾಗಿದೆ.

ರತ್ನಪ್ರಭಾ ಅವರ ಸೇವಾವಧಿಯ ವಿಸ್ತರಣೆ ಕೋರಿ ಸಿಎಂ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಪತ್ರ ಬರೆದಿದ್ದು, ಸೆಪ್ಟೆಂಬರ್ ವರೆಗೆ ಅವರ ಸೇವೆ ಸರ್ಕಾರಕ್ಕೆ ಅಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ರತ್ನಪ್ರಭಾ ಅವರ ಸೇವಾವಧಿ ವಿಸ್ತರಣೆಯನ್ನು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ವಿರೋಧಿಸಿದ್ದರು. ಇದೀಗ ಆಡಳಿತದ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಂಡು ಅವರ ಸೇವಾವಧಿ ವಿಸ್ತರಣೆಗೆ ಅಸ್ತು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಇದೆಲ್ಲಾ ಮೇಲ್ನೋಟಕ್ಕೆ ಕಂಡುಬರುತ್ತಿರುವ ಬೆಳವಣಿಗೆಯಾದರೆ ರತ್ನಪ್ರಭ ಅವರ ಸೇವಾವಧಿ ವಿಸ್ತರಣೆಗೆ ಬೇರೆಯದ್ದೇ ಕಾರಣಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರತ್ನಪ್ರಭ ದಲಿತ ಅಧಿಕಾರಿ ಎಂಬುದು ಅವರ ಸೇವಾವಧಿ ವಿಸ್ತರಣೆಗೆ ಮೂಲ ಕಾರಣ ಎಂಬುದು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿ ಬರುತ್ತಿರುವ ಗುಸುಗುಸು.

ಇಷ್ಟೇ ಅಲ್ಲದೇ ರತ್ನಪ್ರಭಾ ಸೇವಾವಧಿ ವಿಸ್ತರಣೆಯ ಕ್ರೆಡಿಟ್ ಪಡೆಯಲು ಖುದ್ದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ. ಪರಮೇಶ್ವರ್ ಸ್ಪರ್ಧೆಗೆ ಇಳಿದಂತೆ ಕಂಡು ಬರುತ್ತಿದೆ. ತಮ್ಮ ಸರ್ಕಾರದಲ್ಲಿ ದಲಿತರಿಗೆ ಆದ್ಯತೆ ಎಂದು ಸಾರುವುದು ಸಿಎಂ ಉದ್ದೇಶವಾದರೆ, ಖುದ್ದು ದಲಿತ ನಾಯಕರಾಗಿರುವ ಪರಮೇಶ್ವರ್ ತಮ್ಮ ಅನುಗ್ರಹದಿಂದಲೇ ರತ್ನಪ್ರಭ ಮತ್ತೆ ರಾಜ್ಯದ ಸೇವೆ ಮಾಡಲಿದ್ದಾರೆ ಎಂಬ ಸಂದೇಶ ಕಳುಹಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಹೇಳಿಕೆ ಗಮನಿಸಿದರೆ ಈ ಅನುಮಾನ ಕಾಡದೆ ಇರದು. ದಲಿತ ಟ್ರಂಪ್ ಕಾರ್ಡ್ ಬಳಸಲು ಸರ್ಕಾರದ ಮುಖ್ಯಸ್ಥರೇ ಸ್ಪರ್ಧೆಗೆ ಬಿದ್ದಿದ್ದಾರೆ ಎಂಬ ಸಂದೇಶವನ್ನು ಅವರಾಗಿಯೇ ಕಳುಹಿಸುತ್ತಿದ್ದಾರೆ ಎಂಬುದು ಹಲವರ ಅಂಬೋಣ.

ಆದರೆ ಸರ್ಕಾರದ ಮೂಲಗಳು ಹೇಳುವ ಪ್ರಕಾರ, ಈಗಷ್ಟೇ ಆಡಳಿತದ ಹಳಿಯ ಮೇಲೆ ಕಾಲಿಟ್ಟಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ, ಮುಖ್ಯ ಕಾರ್ಯದರ್ಶಿಯನ್ನು ಬದಲಾವಣೆ ಮಾಡಿ ಗೊಂದಲಕ್ಕೆ ಆಸ್ಪದ ಮಾಡಿಕೊಡುವುದು ಬೇಕಿಲ್ಲ.

ಒಂದು ವೇಳೆ ಹೊಸ ಮುಖ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿದರೆ ಅವರಿಗೆ ಸರ್ಕಾರದ ಜೊತೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ ಮುಖ್ಯ ಕಾರ್ಯದರ್ಶಿ ಬದಲಾವಣೆಯಿಂದ ಮುಂದಿನ ತಿಂಗಳು ಬಜೆಟ್ ಮಂಡನೆಗೆ ಸಿದ್ದತೆ ನಡೆಸಿರುವ ಸಿಎಂ ಕುಮಾರಸ್ವಾಮಿ ಅವರಿಗೆ ತೊಡಕಾಗಬಹುದು ಎಂಬ ಕಾರಣಕ್ಕೆ ಜೆಡಿಎಸ್ ವರಿಷ್ಠ  ಹೆಚ್.ಡಿ. ದೇವೆಗೌಡ ರತ್ನಪ್ರಭಾ ಅವರನ್ನೇ ಮುಂದುವರೆಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ದೇವೆಗೌಡರ ಸಲಹೆಯನ್ನು ಸಿಎಂ ಕುಮಾರಸ್ವಾಮಿ ಒಪ್ಪಿದ್ದರೆ, ಡಿಸಿಎಂ ಡಾ. ಜಿ. ಪರಮೇಶ್ವರ್ ಅಸಮ್ಮತಿ ಸೂಚಿಸಿದ್ದರು. ಅಂದರೆ ಮುಖ್ಯ ಕಾರ್ಯದರ್ಶಿ ಬದಲಾವಣೆಗೆ ಡಿಸಿಎಂ ಮನಸ್ಸು ಮಾಡಿದ್ದರು. ಆದರೆ ಬದಲಾವಣೆ ಆಗದು ಎಂಬುದು ಗೊತ್ತಾಗುತ್ತಿದ್ದಂತೇ ಇದರ ಕ್ರೆಡಿಟ್‌ನ್ನು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅಲ್ಲದೇ ಈ ಹಿಂದೆ ರತ್ನಪ್ರಭಾ ಸೇವಾವಧಿ ವಿಸ್ತರಣೆಗೆ ಅಪಸ್ವರ ಎತ್ತಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೆಗೌಡ, ಸರ್ಕಾರದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರುವುದು ದಲಿತ ಓಲೈಕೆ ರಾಜಕಾರಣದ ವಾಸನೆ ಬರುವಂತೆ ಮಾಡಿದೆ. ಅದೇನೆ ಇರಲಿ ರತ್ನಪ್ರಭಾ ಅವರ ಸೇವಾವಧಿ ವಿಸ್ತರಣೆ ರಾಜ್ಯದ ಹಿತಾಸಕ್ತಿಗಾಗಿಯೋ ಅಥವಾ ದಲಿತ ಟ್ರಂಪ್ ಕಾರ್ಡ್ ಬಳಸಿಕೊಂಡು ರಾಜಕೀಯ ಲಾಭ ಗಳಿಸುವ ಹುನ್ನಾರವೋ ಎಂಬ ಪ್ರಶ್ನೆ ಮಾತ್ರ ರಾಜ್ಯದ ಜನರನ್ನು ಕಾಡುತ್ತಿದೆ.

click me!