ವಿಧಾನಸಭಾ ಚುನಾವಣೆಗೆ ನಾವ್ ರೆಡಿ: ರಜನೀಕಾಂತ್

By Web DeskFirst Published Apr 20, 2019, 9:15 AM IST
Highlights

ತ.ನಾಡು ಅಸೆಂಬ್ಲಿ ಸ್ಪರ್ಧೆಗೆ ರಜನಿ ರೆಡಿ| ಯಾವಾಗ ಚುನಾವಣೆ ಎದುರಾದರೂ ಕಣಕ್ಕಿಳಿವೆ: ಸೂಪರ್‌ಸ್ಟಾರ್‌| ಮೇ 23ಕ್ಕೆ ತ.ನಾಡು ಸರ್ಕಾರ ಪತನ ವದಂತಿ ಬೆನ್ನಲ್ಲೇ ಘೋಷಣೆ

ಚೆನ್ನೈ[ಏ.20]: ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ತಮಿಳುನಾಡು ಸರ್ಕಾರ ಪತನಗೊಳ್ಳಬಹುದು ಎಂಬ ವದಂತಿ ವ್ಯಾಪಕವಾಗಿ ಹಬ್ಬಿರುವಾಗಲೇ ತಮಿಳು ಚಿತ್ರರಂಗದ ‘ಸೂಪರ್‌ಸ್ಟಾರ್‌’ ರಜನೀಕಾಂತ್‌ ಅವರು ವಿಧಾನಸಭೆ ಚುನಾವಣೆ ಅಖಾಡಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಾವು ರಾಜಕೀಯ ಪ್ರವೇಶಿಸುವುದಾಗಿ ಅವರು ತಿಳಿಸಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಪ್ರತ್ಯೇಕ ಪಕ್ಷದೊಂದಿಗೆ ರಾಜಕೀಯ ಅಖಾಡಕ್ಕೆ ಇಳಿಯುವ ಮನದಿಂಗಿತ ಪ್ರಕಟಿಸಿ ಮೌನಕ್ಕೆ ಶರಣಾಗಿದ್ದ ರಜನೀಕಾಂತ್‌ ಅವರು, ತಮಿಳುನಾಡು ವಿಧಾನಸಭೆ ಚುನಾವಣೆ ಯಾವಾಗ ಎದುರಾದರೂ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ರಾಜಕೀಯ ಪ್ರವೇಶ ಆಸೆ ಬಹಿರಂಗಪಡಿಸಿದ ಬಳಿಕ ‘ರಜಿನಿ ಮಕ್ಕಳ್‌ ಮಂದ್ರಮ್‌’ ಎಂಬ ವೇದಿಕೆಯೊಂದನ್ನು ಅವರು ಹುಟ್ಟುಹಾಕಿದ್ದರು.

ಸರ್ಕಾರ ಪತನ ವದಂತಿ ಏಕೆ?:

ಲೋಕಸಭೆ ಚುನಾವಣೆಯ ಜತೆಗೇ ತಮಿಳುನಾಡಿನಲ್ಲಿ 22 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕೂಡ ನಡೆಯುತ್ತಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕು. ಸದ್ಯ ಪಳನಿಸ್ವಾಮಿ ಸರ್ಕಾರದಲ್ಲಿ 114 ಶಾಸಕರು ಇದ್ದಾರೆ. ಆ ಪೈಕಿ ಮೂವರು ಬಂಡಾಯ ನಾಯಕ ಟಿಟಿವಿ ದಿನಕರನ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಅಣ್ಣಾಡಿಎಂಕೆ ಬಳಿ 111 ಶಾಸಕರು ಉಳಿದಂತಾಗಿದೆ.

ಒಂದು ವೇಳೆ, ಉಪಚುನಾವಣೆಯಲ್ಲಿ ಕನಿಷ್ಠ 7ರಿಂದ 8 ಸ್ಥಾನಗಳನ್ನು ಅಣ್ಣಾಡಿಎಂಕೆ ಗೆಲ್ಲದೇ ಹೋದಲ್ಲಿ ಸರ್ಕಾರಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲೇ ಚುನಾವಣೆ ಯಾವಾಗ ಎದುರಾದರೂ ಸ್ಪರ್ಧೆಗೆ ಸಿದ್ಧ ಎಂದು ರಜನಿ ಸಾರಿರುವುದು ಮಹತ್ವ ಪಡೆದುಕೊಂಡಿದೆ. ಯಾವುದೇ ಸಮಸ್ಯೆ ಎದುರಾಗದಿದ್ದರೆ ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರಕ್ಕೆ 2021ರವರೆಗೂ ಅಧಿಕಾರಾವಧಿ ಇದೆ.

click me!