ಶೇ. 0.50ರಷ್ಟು ಬಡ್ಡಿದರ ಕಡಿತವಾಗುತ್ತದೆಯಾ?

By Suvarna Web DeskFirst Published Dec 7, 2016, 6:34 AM IST
Highlights

ರಾಷ್ಟ್ರದ ಕುಗ್ಗಿದ ಆರ್ಥಿಕ ಚಟುವಟಿಗೆ ಚೇತರಿಕೆ ಅಗತ್ಯ

ಮುಂಬೈ: ನೋಟು ಚಲಾವಣೆ ರದ್ದು ಮಾಡಿದ ನಂತರ ಸುಧೀರ್ಘ ಮೌನವಹಿಸಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ನೀರಿಕ್ಷೆ ಮೀರಿ ಹೆಚ್ಚು ಬಡ್ಡಿದರ ತಗ್ಗಿಸಿ ಟೀಕಾಕಾರರ ಬಾಯಿ ಮುಚ್ಚಿಸುತ್ತಾರ ಎಂಬ ಕುತೂಹಲ ಎಲ್ಲರಲ್ಲಿದೆ. ನೋಟು ಚಲಾವಣೆ ರದ್ದು ಮಾಡಿರುವುದರಿಂದ ಬ್ಯಾಂಕುಗಳಿಗೆ ಹರಿದು ಬಂದಿರುವ ನಗದು ಮತ್ತು ಅಕ್ಟೋಬರ್‌ ತಿಂಗಳಲ್ಲಿ ತಗ್ಗಿದ ಹಣ​ದುಬ್ಬರವು ಶೇ.0.25ರಷ್ಟುಬಡ್ಡಿ ಕಡಿತ ಮಾಡ​ಲಿಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ, ನವೆಂ​ಬರ್‌ ತಿಂಗಳಲ್ಲೂ ಹಣದುಬ್ಬರ ತಗ್ಗಿರುವ ನಿರೀಕ್ಷೆ ಇರುವುದರಿಂದ ಶೇ.0.50ರಷ್ಟುಬಡ್ಡಿ ಕಡಿತ ಮಾಡುತ್ತಾರೆಂಬ ಅಂದಾಜು ಹಲವರಲ್ಲಿದೆ.

ಮಂಗಳವಾರ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆ ಆರಂಭವಾಗಿದ್ದು, ಬುಧವಾರ ಮಧ್ಯಾಹ್ನ ಸಭೆ ನಂತರ ಬಡ್ಡಿದರ ಪ್ರಕಟಿಸ​ಲಾಗು​ತ್ತದೆ. ಅಕ್ಟೋಬರ್‌ನಲ್ಲಿ ಶೇ.0.25ರಷ್ಟುಬಡ್ಡಿ ತಗ್ಗಿಸಲಾಗಿತ್ತು. ನವೆಂಬರ್‌ ತಿಂಗಳಿಡೀ ದೇಶೀಯ ಆರ್ಥಿಕ ಚಟುವಟಿಕೆ ತಗ್ಗಿರುವ ಹಿನ್ನೆಲೆಯಲ್ಲಿ ತ್ವರಿತ ಚೇತರಿಕೆ ನೀಡಲು ಬಡ್ಡಿದರ ಶೇ.0.50ರಷ್ಟಾದರೂ ಕಡಿತ ಮಾಡಬೇಕೆಂಬ ವಾದ ಹಲವು ಅರ್ಥಿಕ ತಜ್ಞರದ್ದು.

ಬ್ಯಾಂಕಿಂಗ್‌ ವಲಯ ಮತ್ತು ಬಂಡವಾಳ ಪೇಟೆಯೂ ಇದನ್ನೆ ನಿರೀಕ್ಷಿಸುತ್ತಿದೆ. ಕೇಂದ್ರ ಸರ್ಕಾರದ ಆಶಯವೂ ಬಡ್ಡಿದರ ಮತ್ತಷ್ಟುಕಡಿತ ಮಾಡಬೇಕೆಂಬುದಾಗಿದೆ. ಈ ಹಿಂದೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶೇ.1ರಷ್ಟಾದರೂ ಬಡ್ಡಿ ತಗ್ಗಿಸುವುದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಊರ್ಜಿತ್‌ ಪಟೇಲ್‌ ಶೇ.0.50ರಷ್ಟುಬಡ್ಡಿದರ ತಗ್ಗಿಸಬಹುದು.

ಇದರಿಂದ ಅಲ್ಪಕಾಲೀನ ಮತ್ತು ದೀರ್ಘ​ಕಾಲೀನ ಪರಿಣಾಮಗಳು ಸಕಾರಾತ್ಮಕ​ವಾಗಲಿವೆ. ಕುಸಿದಿರುವ ರಿಯಲ್‌ ಎಸ್ಟೇಟ್‌ ವಲಯ ಚೇತರಿಸಿಕೊಳ್ಳಬೇಕಾದರೆ ಬಡ್ಡಿದರ ಕಡಿತ ಅಗತ್ಯ. ಸುಮಾರು ಮೂರು ವರ್ಷಗಳಿಂದ ಖರೀದಿ​ಯಾಗದೇ ಉಳಿದಿರುವ ಘಟಕಗಳನ್ನು ವಿಲೇವಾರಿ ಮಾಡಲು ಮತ್ತು ಅರ್ಧಕ್ಕೆ ನಿಂತ ವಿವಿಧ ವಸತಿಯೋಜನೆಗಳನ್ನು ಪೂರ್ಣ​ಗೊಳಿಸಲು ರಿಯಲ್‌ ಎಸ್ಟೇಟ್‌ ವಲಯವು ಕಡಮೆ ಬಡ್ಡಿದರದ ಬಂಡವಾಳದ ನಿರೀಕ್ಷೆಯಲ್ಲಿದೆ. ಪ್ರಸ್ತುತ ರೆಪೊದರ ಅಂದರೆ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿದರ ಶೇ.6.25ರಷ್ಟಿದೆ. ರಿವರ್ಸ್‌ ರೆಪೋದರ ಅಂದರೆ ಬ್ಯಾಂಕುಗಳು ತಾವು ಆರ್‌ಬಿಐನಲ್ಲಿ ಇಟ್ಟಿರುವ ಹಣಕ್ಕೆ ಪಡೆಯುವ ಬಡ್ಡಿದರ ಶೇ.5.75ರಷ್ಟಿದೆ.

ಆದರೆ, ಬಹುತೇಕ ಬ್ಯಾಂಕುಗಳು ಗೃಹಸಾಲದ ಮೇಲಿನ ಬಡ್ಡಿದರವನ್ನು ಶೇ.9.50ರಷ್ಟುವಿಧಿಸುತ್ತಿವೆ. ಇದು ಬಹುತೇಕ ಗ್ರಾಹಕರಿಗೆ ಹೊರೆಯಾಗುತ್ತಿದೆ. ರೆಪೊದರ ಶೇ.0.50ರಷ್ಟುಇಳಿದು, ಬ್ಯಾಂಕುಗಳು ಗೃಹಸಾಲದ ಮೇಲಿನ ಬಡ್ಡಿದರವನ್ನು ಶೇ.8.50-8.75ರ ಆಜುಬಾಜಿಗೆ ಇಳಿಸಿದರೆ ರಿಯಲ್‌ ಎಸ್ಟೇಟ್‌ ಉದ್ಯಮವಷ್ಟೇ ಅಲ್ಲ, ಇತರ ನಿರ್ಮಾಣ ಚಟುವಟಿಕೆಗಳಿಗೂ ಚೇತರಿಕೆ ಬರಲಿದೆ. ನೋಟು ಚಲಾವಣೆ ರದ್ದು ಮಾಡಿದ ಪರಿಣಾಮ ಹಳೆಯ ನೋಟುಗಳು ಬ್ಯಾಂಕುಗಳಿಗೆ ಹರಿದು ಬಂದ ಹಿನ್ನೆಲೆಯಲ್ಲಿ ಆರ್‌ಬಿಐ ನಗದು ಮೀಸಲು ಪ್ರಮಾಣವನ್ನು ಶೇ.100ರಷ್ಟುಏರಿಸಿದೆ. ನವೆಂಬರ್‌ 8ರವರೆಗೆ ಬ್ಯಾಂಕುಗಳಲ್ಲಿ ಜಮೆ​ಯಾಗಿದ್ದ ನಗದನ್ನು ಮೀಸಲಾಗಿ ಪರಿವರ್ತಿ​ಸಿದೆ. ಈಪ್ರಮಾಣವನ್ನು ಮುಂದುವರೆಸುವ ಅಥವಾ ತಗ್ಗಿಸುವ ಬಗ್ಗೆ ಡಿಸೆಂಬರ್‌ 9 ರಂದು ನಿರ್ಧಾರ ಕೈಗೊಳ್ಳಲಿದೆ.

(epaper.kannadaprabha.in)

click me!