ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಆಹಾರ ಧಾನ್ಯಗಳ ವಿತರಣಾ ಪ್ರಮಾಣ ಹೆಚ್ಚಳ: ಸಿಎಂ

Published : Jan 31, 2017, 03:19 PM ISTUpdated : Apr 11, 2018, 12:56 PM IST
ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಆಹಾರ ಧಾನ್ಯಗಳ ವಿತರಣಾ ಪ್ರಮಾಣ ಹೆಚ್ಚಳ: ಸಿಎಂ

ಸಾರಾಂಶ

ಹಸಿವು ಮುಕ್ತ ಕರ್ನಾಟಕ ರಾಜ್ಯದ ಗುರಿ ಈಡೇರಿಕೆ ಹಿನ್ನೆಲೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಏಪ್ರಿಲ್ ಒಂದರಿಂದ ಧಾನ್ಯ ವಿತರಣೆ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಡಿತರ ಧಾನ್ಯದ ಬದಲಾಗಿ ನಗದು ಹಣ ವಿತರಣೆ ಯೋಜನೆ ಕೈಬಿಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ನಿರ್ದೇಶನ ನೀಡಿದರು.

ಬೆಂಗಳೂರು (ಜ.31): ಹಸಿವು ಮುಕ್ತ ಕರ್ನಾಟಕ ರಾಜ್ಯದ ಗುರಿ ಈಡೇರಿಕೆ ಹಿನ್ನೆಲೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಏಪ್ರಿಲ್ ಒಂದರಿಂದ ಧಾನ್ಯ ವಿತರಣೆ ಪ್ರಮಾಣ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಡಿತರ ಧಾನ್ಯದ ಬದಲಾಗಿ ನಗದು ಹಣ ವಿತರಣೆ ಯೋಜನೆ ಕೈಬಿಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ನಿರ್ದೇಶನ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ರಿಯಾಯಿತಿ ದರದಲ್ಲಿ ಬೇಳೆಕಾಳು ವಿತರಣೆ, ಆನ್‌ಲೈನ್ ಪಡಿತರ ಚೀಟಿ ವಿತರಣೆ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಪನ್ ವಿತರಣೆ ಯೋಜನೆಗಳಿಗೆ ಚಾಲನೆ ನೀಡಿ, ಮಾತನಾಡಿದರು.

ರಾಜ್ಯದಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಹಾಗೂ ಅಪೌಷ್ಠಿಕತೆಯಿಂದ ಬಳಲಬಾರದು ಎಂಬುದು ಸರ್ಕಾರದ ಧ್ಯೇಯ. ಈ ನಿಟ್ಟಿನಲ್ಲಿ ಕಡು ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಜತೆಗೆ ಅರ್ಧಬೆಲೆಯಲ್ಲಿ ಬೇಳೆಕಾಳು ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಅಲ್ಲದೇ ಶಾಲಾ ಹಂತದಲ್ಲೇ ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ಕಾಡಬಾರದು ಎಂಬ ನಿಟ್ಟಿನಲ್ಲಿ ಹಾಲು ವಿತರಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಡಿತರ ಚೀಟಿ ಪಡೆಯುವುದೇ ಒಂದು ಸಾಹಸವಾಗಿತ್ತು. ಆದರೆ ನಮ್ಮ ಸರ್ಕಾರ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಆನ್‌ಲೈನ್ ಮೂಲಕ ವಿತರಿಸುವ ಮೂಲಕ ದೇಶದಲ್ಲೇ ಮಾದರಿ ಯೋಜನೆ ಜಾರಿಗೊಳಿಸಿದೆ. ಅಲ್ಲದೇ ಕೂಪನ್ ವ್ಯವಸ್ಥೆ ಮೂಲಕ ಆಹಾರ ಧಾನ್ಯ ನಿಜವಾದ ಫಲಾನುಭವಿಗಳಿಗೆ ತಲುಪಲಿದೆ. ಇಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.

ನಗದು ಯೋಜನೆ ಸ್ಥಳದಲ್ಲೇ ರದ್ದುಪಡಿಸಿದ ಸಿಎಂ

ರಾಜ್ಯದ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಪಡಿತರ ಧಾನ್ಯದ ಬದಲಾಗಿ ನಗದು ವಿತರಣೆ ಯೋಜನೆ ಕುರಿತಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫಲಾನುಭವಿಗಳ ಅಭಿಪ್ರಾಯವನ್ನು ನೇರವಾಗಿ ಪಡೆದ ಸಿಎಂ ಸಿದ್ದರಾಮಯ್ಯ, ಬಹುತೇಕ ಫಲಾನುಭವಿಗಳಿಂದ ಬಂದ ಪ್ರತಿಕ್ರಿಯೆ ಆಧರಿಸಿ, ಕೂಡಲೇ ನಗದು ವಿತರಣೆ ಯೋಜನೆ ರದ್ದುಗೊಳಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಅವರಿಗೆ ನಿರ್ದೇಶನ ನೀಡಿದರು.

ಬಡವರಿಗೆ ಕನಿಷ್ಠ ಪ್ರಮಾಣದ ಆಹಾರ ಧಾನ್ಯಗಳು ಅವರ ಮನೆ ತಲುಪಬೇಕು. ಅದರ ಬದಲಾಗಿ ಹಣವನ್ನು ನೀಡುವುದರಿಂದ ಅದರ ದುರುಪಯೋಗ ಹೆಚ್ಚಾಗುತ್ತದೆ. ಅನೇಕ ಸಲ ನಗದನ್ನು ಆಹಾರ ಧಾನ್ಯ ಖರೀದಿಗೆ ಬಳಸದೇ ಕುಟುಂಬದ ಸದಸ್ಯರನ್ನು ಸಂಕಷ್ಟಕ್ಕೆ ದೂಡುವ ಅಪಾಯವಿರುತ್ತದೆ. ಜನರ ಭಾವನೆಗಳು ನನಗೆ ಅರ್ಥವಾಗುತ್ತವೆ. ಆದ್ದರಿಂದ ನಗದು ಬದಲಾಗಿ ಹಿಂದಿನಂತೆ ಆಹಾರ ಧಾನ್ಯ ನೀಡುವ ವ್ಯವಸ್ಥೆಯನ್ನೇ ಮತ್ತಷ್ಟು ಸಶಕ್ತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಿದ್ದರಾಮಯ್ಯ ಫಲಾನುಭವಿಗಳಿಗೆ ಭರವಸೆ ನೀಡಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!