ರಾಜ್ಯದಲ್ಲಿ ಮತ್ತೊಂದು ಕಾಯಿಲೆ ಭೀತಿ : ಇಂತಹ ಲಕ್ಷಣ ಕಂಡಲ್ಲಿ ಎಚ್ಚರ..!

By Web DeskFirst Published Sep 5, 2018, 9:34 AM IST
Highlights

ಪ್ರವಾಹ ಪೀಡಿತ ಕೇರಳದಲ್ಲಿ ಕಾಣಿಸಿಕೊಂಡಿದ್ದ ಆತಂಕಕಾರಿ ರೋಗದ ಭೀತಿ ಇದೀಗ ಕರ್ನಾಟಕ್ಕೂ ತಗುಲಿದೆ. ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಇಲಿ ಜ್ವರ ಕಾಣಿಸಿಕೊಂಡಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ. 

ಬೆಂಗಳೂರು :  ಪ್ರವಾಹಪೀಡಿತ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವೇಳೆ ಇತ್ತ ನಮ್ಮ ರಾಜ್ಯದಲ್ಲೂ ಕಳೆದ ಜನವರಿಯಿಂದ ಈವರೆಗೆ ಒಟ್ಟಾರೆ 136 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಕರಾವಳಿ ಪ್ರದೇಶಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಭಾಗದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಇಲಿ ಜ್ವರ ಪ್ರಕರಣಗಳು ಕಂಡು ಬರಲಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 187 ಪ್ರಕರಣಗಳು ಕಂಡು ಬಂದಿದ್ದವು. ಕಳೆದ ವರ್ಷಕ್ಕೆ ಹೋಲಿಸಿಕೊಂಡಲ್ಲಿ ಈ ವರ್ಷ ಕಡಿಮೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ಬಿ.ಜಿ. ಪ್ರಕಾಶ್‌ಕುಮಾರ್‌ ತಿಳಿಸಿದ್ದಾರೆ.

ಇಲಿ ಜ್ವರವು ಬ್ಯಾಕ್ಟೀರಿಯಾಗಳ ಮೂಲಕ ಹರಡಲಿದ್ದು, ಕಾಯಿಲೆ ವೈರಲ್‌ ಆಗುವುದಿಲ್ಲ. ಸೂಕ್ತ ಚಿಕಿತ್ಸೆ ಇರುವುದರಿಂದ ಜನರು ಗಾಬರಿಯಾಗುವ ಅವಶ್ಯವಿಲ್ಲ. ಆದರೆ, ಮಳೆಗಾಲವಾಗಿರುವ ಕಾರಣ ಮನೆಯ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಪಾತ್ರೆಗಳು ಮತ್ತು ಆಹಾರ ಪದಾರ್ಥಗಳ ಪಾತ್ರೆಗಳನ್ನು ಮುಚ್ಚಿಡುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇಲಿ, ಹೆಗ್ಗಣಗಳ ಮಲ-ಮೂತ್ರಗಳು ಮಿಶ್ರಣವಾಗಿರುವ ನೀರು ಮತ್ತು ಮಣ್ಣನ್ನು ಮನುಷ್ಯರು ಬರಿಗಾಲಲ್ಲಿ ತುಳಿಯುವುದರಿಂದ ಕಾಯಿಲೆ ಹರಡುವ ಸಾಧ್ಯತೆಗಳಿವೆ. ಕಾಲಿನಲ್ಲಿ ಗಾಯವಾಗಿರುವ ಮತ್ತು ಚರ್ಮ ಒಡೆದಿರುವವರಿಗೆ ಹೆಚ್ಚಿನದಾಗಿ ಕಾಣಿಸಿಕೊಳ್ಳಲಿವೆ. ಕೃಷಿ ಕಾರ್ಮಿಕರು ಸ್ವಲ್ಪ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಲಕ್ಷಣಗಳು:  ಜ್ವರ, ಮೈ ಕೈ ನೋವು, ತಲೆ ನೋವು, ರಕ್ತಸ್ರಾವ, ಜಾಂಡೀಸ್‌, ಉಸಿರಾಟದ ತೊಂದರೆಗಳು ಕಂಡುಬರುವುದು ರೋಗದ ಲಕ್ಷಣವಾಗಿದೆ. ಇಂತಹ ರೋಗಿಗಳ ರಕ್ತದ ಮಾದರಿ ಸಂಗ್ರಹಿಸಿ ರೋಗ ಪತ್ತೆ ಹಚ್ಚಲಾಗುತ್ತಿದೆ ಎಂದು ಡಾ. ಬಿ.ಜಿ. ಪ್ರಕಾಶ್‌ ಕುಮಾರ್‌ ತಿಳಿಸಿದರು.

(ಸಾಂದರ್ಭಿಕ ಚಿತ್ರ)

click me!