ರಂಜಾನ್ ಕದನ ವಿರಾಮ ವಿಸ್ತರಣೆ ಇಲ್ಲ: ರಾಜನಾಥ್..!

First Published Jun 17, 2018, 2:18 PM IST
Highlights

ರಂಜಾನ್ ಕದನ ವಿರಾಮ ವಿಸ್ತರಣೆ ಇಲ್ಲ ಎಂದ ಕೇಂದ್ರ

ಉಗ್ರರ ನಿರಂತರ ದಾಳಿಯಿಂದಾಗಿ ವಿಸ್ತರಣೆಗೆ ಬ್ರೇಕ್

ಶಾಂತಿ ಸ್ಥಾಪನೆಗೆ ಬೇಕಾದ ಕ್ರಮ ಕೈಗೊಳ್ಳಲು ರಾಜನಾಥ್ ಆದೇಶ
 

ನವದೆಹಲಿ(ಜೂ.17): ಉಗ್ರರ ಸರಣಿ ದಾಳಿ ಮತ್ತು ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿಯಿಂದಾಗಿ ಕೇಂದ್ರ ಸರ್ಕಾರ ರಂಜಾನ್ ಕದನ ವಿರಾಮ ವಿಸ್ತರಣೆ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಂಜಾನ್ ಕದನ ವಿರಾಮ ವಿಸ್ತರಣೆ ಮಾಡುವ ಈ ಹಿಂದಿನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದರು. ಕಳೆದ ಮೇ 17ರಂದು ಪವಿತ್ರ ರಂಜಾನ್ ಮಾಸದಲ್ಲಿ ಭಾರತೀಯ ಸೇನೆ ಯಾವುದೇ ರೀತಿಯ ಸೈನಿಕ ಕಾರ್ಯಾಚರಣೆ ಮಾಡದಂತೆ, ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡಲು ಕದನ ವಿರಾಮವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರ ಉಗ್ರ ದಾಳಿ, ಪಾಕಿಸ್ತಾನ  ಸೇನೆಯ ಅಪ್ರಚೋದಿತ ದಾಳಿ ಪ್ರಕರಣಗಳು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಎನ್‌ಡಿಎ ಮಿತ್ರಪಕ್ಷ ಶಿವಸೇನೆ ಕೂಡ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿತ್ತು. 

ಸೇನೆ ಶಾಂತಿಯುತವಾಗಿದ್ದರೂ ಅವರನ್ನು ಕೆಣಕುವ ಕೆಲಸವನ್ನು ಉಗ್ರರು ಮಾಡುತ್ತಿದ್ದಾರೆ. ಸರಣಿ ದಾಳಿಗಳಿಂದಾಗಿ ಸೈನಿಕರು ಹುತಾತ್ಮರಾಗಿದ್ದಾರೆ. ಉಗ್ರರು ಮತ್ತು ಪಾಕಿಸ್ತಾನ ಸೇನೆಯ ದಾಳಿಯಿಂದಾಗಿ ಕಣಿವೆ ರಾಜ್ಯದ ಜನರಿಗೆ ಅನಾನೂಕೂಲವಾಗುತ್ತಿದೆ. ಹೀಗಾಗಿ ರಂಜಾನ್ ಕದನ ವಿರಾಮ ವಿಸ್ತರಣೆ ಮಾಡದೆ ಶಾಂತಿ ಸ್ಥಾಪನೆಗಾಗಿ ಬೇಕಾದ ಎಲ್ಲ ಕಾರ್ಯಗಳನ್ನು ಕೈಗೊಳ್ಳುವಂತೆ ಸೈನಿಕರಿಗೆ ಆದೇಶಿಸಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

click me!