
ನವದೆಹಲಿ(ಜೂನ್ 19): ಸಾಕಷ್ಟು ವಿಚಾರಗಳಲ್ಲಿ ಅಚ್ಚರಿಯ ಮೇಲೆ ಅಚ್ಚರಿ ನಿರ್ಧಾರ ಕೈಗೊಳ್ಳುತ್ತಾ ಬಂದಿರುವ ಕೇಂದ್ರ ಸರಕಾರದ ಅಚ್ಚರಿಗಳ ಪಟ್ಟಿಗೆ ಈಗ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯೂ ಸೇರಿದೆ. ಬಿಜೆಪಿ ಮುಖಂಡ ಹಾಗೂ ಬಿಹಾರ ರಾಜ್ಯಪಾಲ ರಾಮ್'ನಾಥ್ ಕೋವಿಂದ್ ಅವರನ್ನು ಎನ್'ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ರಾಮನಾಥ್ ಕೋವಿಂದ್ ಹೆಸರನ್ನು ಘೋಷಿಸಿದ್ದಾರೆ. ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು, ದ್ರೌಪದಿ ಮುರ್ಮು ಮೊದಲಾದ ಹೆಸರುಗಳು ರಾಷ್ಟ್ರಪತಿ ಅಭ್ಯರ್ಥಿ ವಿಚಾರದಲ್ಲಿ ಚಲಾವಣೆಯಲ್ಲಿದ್ದವು. ಆದರೆ, ರಾಮ್'ನಾಥ್ ಕೋವಿಂದ್ ಹೆಸರು ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಈ ನಿರ್ಧಾರ ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.
ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲೆಂದೇ ಅಮಿತ್ ಶಾ ಅವರು ಮೂರು ಸದಸ್ಯರ ತಂಡವೊಂದನ್ನ ರಚಿಸಿದ್ದರು. ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್ ಅವರು ಈ ತಂಡದ ಭಾಗವಾಗಿದ್ದು ವಿಶೇಷ. ವಿಪಕ್ಷಗಳ ಬೆಂಬಲವನ್ನೂ ಪಡೆದು ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಈ ತಂಡದ ಪ್ರಮುಖ ಗುರಿಯಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ಸರ್ವಸಮ್ಮತ ಅಭ್ಯರ್ಥಿಯಾಗಬೇಕೆನ್ನುವುದು ಬಿಜೆಪಿಯ ಉದ್ದೇಶ. ಕಟ್ಟರ್ ಹಿಂದೂವಾದಿ ಬದಲು ಉದಾರವಾದಿ ಎನಿಸುವ ಅರ್ಹ ಅಭ್ಯರ್ಥಿಯ ತಲಾಶ್'ನಲ್ಲಿ ಅವರಿದ್ದರು. ಈ ಹಿನ್ನೆಲೆಯಲ್ಲಿ ದಲಿತ ಮುಖಂಡ ರಾಮ್'ನಾಥ್ ಕೋವಿಂದ್ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸಾಧ್ಯತೆ ಇದೆ.
ಬಿಜೆಪಿ ಸಂಸದೀಯ ಸಮಿತಿಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರ ಸಂಬಂಧ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ಇತರ ನಾಯಕರೊಂದಿಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆನ್ನಲಾಗಿದೆ. ಇದೇ ವೇಳೆ, ಜೂನ್ 23ರಂದು ಕೋವಿಂದ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಯಾರು ಈ ರಾಮ್'ನಾಥ್ ಕೋವಿಂದ್?
ಉತ್ತರಪ್ರದೇಶದ ಕಾನ್'ಪುರ್ ಜಿಲ್ಲೆಯ ದಲಿತ ಕುಟುಂಬಕ್ಕೆ ಸೇರಿದವರು ರಾಮ್'ನಾಥ್ ಕೋವಿಂದ್. ಅಕ್ಟೋಬರ್1, 1945ರಲ್ಲಿ ಜನಸಿದ 71 ವರ್ಷದ ಕೋವಿಂದ್ ಸದ್ಯ ಬಿಹಾರದ ರಾಜ್ಯಪಾಲರಾಗಿದ್ದಾರೆ. ಬಿಜೆಪಿಯ ಪ್ರಮುಖ ದಲಿತ ಮುಖಂಡರೆನಿಸಿರುವ, ವೃತ್ತಿಯಲ್ಲಿ ವಕೀಲರಾಗಿರುವ ರಾಮನಾಥ್ ಕೋವಿಂದ್ ಅವರು ಉತ್ತರಪ್ರದೇಶದಿಂದ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯ ವಕ್ತಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.