
ಎಸ್.ಗಿರೀಶ್‌ಬಾಬು
ಬೆಂಗಳೂರು : ರಾಜಧಾನಿಯ ಜಯನಗರ ಕ್ಷೇತ್ರದಿಂದ ತಮ್ಮ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕೆ ಇಳಿಸಲು ಸರ್ವ ಪ್ರಯತ್ನ ನಡೆಸುತ್ತಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈಗ ಅತ್ಯಂತ ಪ್ರಬಲ ಪೈಪೋಟಿ ಎದುರಾಗಿದೆ.
ಕಾಂಗ್ರೆಸ್ ನಡೆಸಿರುವ ಸಮೀಕ್ಷೆ ಪ್ರಕಾರ ಪಕ್ಷ ಗೆಲ್ಲಬಹುದಾದ ಬೆಂಗಳೂರಿನ ಕ್ಷೇತ್ರಗಳ ಪೈಕಿ ಜಯನಗರ ಕೂಡ ಒಂದು. ಈ ಕ್ಷೇತ್ರದಲ್ಲಿ ತಮ್ಮ ಪುತ್ರಿಯನ್ನು ಕಣಕ್ಕೆ ಇಳಿಸಲು ಬಹಳ ಹಿಂದಿನಿಂದಲೇ ರಾಮಲಿಂಗಾರೆಡ್ಡಿ ಪ್ರಯತ್ನ ಆರಂಭಿಸಿದ್ದಾರೆ. ಇದುವರೆಗೂ ಅವರ ಪುತ್ರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಕಂಡುಬಂದಿತ್ತು. ಆದರೆ, ಇದೀಗ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಖಾಡ ಪ್ರವೇಶಿಸಿರುವುದು ಪೈಪೋಟಿ ತೀವ್ರಗೊಳ್ಳುವಂತೆ ಮಾಡಿದೆ.
ಪರಮೇಶ್ವರ್ ಅವರು ತಮ್ಮ ಆಪ್ತ ಎಂ.ಸಿ. ವೇಣುಗೋಪಾಲ್‌ಗೆ ಈ ಬಾರಿಯೂ ಜಯನಗರ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿಯೂ ಪರಮೇಶ್ವರ್ ಅವರ ಪ್ರಯತ್ನದಿಂದ ವೇಣುಗೋಪಾಲ್ ಟಿಕೆಟ್ ಗಿಟ್ಟಿಸಿದ್ದರು. ಆದರೆ, ಚುನಾವಣೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಪರಮೇಶ್ವರ್ ಅವರು ವೇಣುಗೋಪಾಲ್ ಪರ ಪ್ರಬಲ ಲಾಬಿ ನಡೆಸಿದ್ದಾರೆ.
ಆದರೆ, ರಾಮಲಿಂಗಾರೆಡ್ಡಿ ಅವರು ಹೈಕಮಾಂಡ್ ಸಂಪರ್ಕಿಸಿ ತಮ್ಮ ಪುತ್ರಿಗೆ ಟಿಕೆಟ್ ಪಡೆಯುವ ಪ್ರಯತ್ನ ತೀವ್ರಗೊಳಿಸಿದ್ದರಿಂದ ತುಸು ಅಸಮಾಧಾನಗೊಂಡಿರುವ ಪರಮೇಶ್ವರ್ ಅವರು ಇತ್ತೀಚೆಗೆ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ನನ್ನ ಕ್ಷೇತ್ರ ಬಿಟ್ಟು ಕೆಲವೇ ಕೆಲವು ಕ್ಷೇತ್ರಗಳಿಗೆ ಟಿಕೆಟ್ ಬಯಸುತ್ತಿದ್ದೇನೆ. ಅದು ಕೂಡ ಕೊಡುವುದಿಲ್ಲ ಎಂದರೆ ನಾನು ಈ ಹುದ್ದೆಯಲ್ಲಿ ಇದ್ದು ಏನು ಪ್ರಯೋಜನ ಎಂದು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ನೇರವಾಗಿ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದು ರಾಮಲಿಂಗಾರೆಡ್ಡಿ ಅವರ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಇದಿಷ್ಟೇ ಅಲ್ಲದೆ, ಈ ಪೈಪೋಟಿಗೆ ಮಲ್ಲಿಕಾರ್ಜುನ ಖರ್ಗೆ ಕೂಡ ಸೇರಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಆಪ್ತ ಯು.ಬಿ. ವೆಂಕಟೇಶ್ ಅವರಿಗೆ ಜಯನಗರ ಟಿಕೆಟ್ ನೀಡುವಂತೆ ಪ್ರಭಾವ ಬೀರತೊಡಗಿದ್ದಾರೆ. ಕಳೆದ ಚುನಾವಣೆಯಲ್ಲೂ ಯು.ಬಿ. ವೆಂಕಟೇಶ್ ಅವರಿಗೆ ಜಯನಗರ ಕ್ಷೇತ್ರದ ಟಿಕೆಟ್ ಕೊಡಿಸಲು ಖರ್ಗೆ ಯತ್ನಿಸಿದ್ದರು. ಆದರೆ, ಆಗ ಪರಮೇಶ್ವರ್ ಕೈ ಮೇಲಾಗಿದ್ದರಿಂದ ಯು.ಬಿ.ವೆಂಕಟೇಶ್‌ಗೆ ಟಿಕೆಟ್ ದೊರಕಿರಲಿಲ್ಲ. ಈ ಬಾರಿ ವೆಂಕಟೇಶ್‌ಗೆ ಟಿಕೆಟ್ ನೀಡಬೇಕು ಎಂದು ಖರ್ಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹೀಗೆ ಪ್ರಭಾವಿಗಳು ಪಟ್ಟು ಹಿಡಿದ ಕಾರಣ ಗತ್ಯಂತರವಿಲ್ಲದೆ ಈ ಕ್ಷೇತ್ರಕ್ಕೆ ಸೌಮ್ಯಾರೆಡ್ಡಿ, ಎಂ.ಸಿ.ವೇಣುಗೋಪಾಲ್ ಹಾಗೂ ಯು.ಬಿ.ವೆಂಕಟೇಶ್ ಅವರ ಹೆಸರಿರುವ ಪ್ಯಾನೆಲ್ ಸಿದ್ಧಪಡಿಸಲಾಗಿದೆ. ಇದನ್ನೇ ಹೈಕಮಾಂಡ್‌ಗೂ ಕಳುಹಿಸಲಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲು ಸ್ಥಳೀಯವಾಗಿ ನಿರ್ಧರಿಸಲಾಗಿದೆ.
ಆದರೆ, ಹೈಕಮಾಂಡ್‌ನಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಭೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇರುತ್ತಾರೆ. ರಾಮಲಿಂಗಾರೆಡ್ಡಿ ಇಂತಹ ಸಭೆಯಲ್ಲಿ ಇರುವುದಿಲ್ಲ. ಹೀಗಾಗಿ ರಾಮಲಿಂಗಾರೆಡ್ಡಿ ನೇರವಾಗಿ ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಮುಂದಾಗಿದ್ದು, ಗೆಲ್ಲುವ ಮಾನದಂಡವನ್ನು ಪರಿಗಣಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಜಯನಗರ ಕ್ಷೇತ್ರದಲ್ಲಿ ಸ್ಥಳೀಯವಾಗಿ ನನಗೆ ಹಿಡಿತವಿದೆ. ಮಗಳಿಗೆ ಟಿಕೆಟ್ ನೀಡಿದರೆ ಬಿಜೆಪಿ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಪಕ್ಷಕ್ಕೆ ಬರುವಂತೆ ಮಾಡುವ ಸಾಮರ್ಥ್ಯವಿದೆ. ಆದರೆ, ಉಳಿದ ಅಭ್ಯರ್ಥಿಗಳಿಗೆ ಆ ಸಾಮರ್ಥ್ಯವಿಲ್ಲ ಎಂದು ಅವರು ಬಿಂಬಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಅಂತಿಮವಾಗಿ ಜಯನಗರ ಕ್ಷೇತ್ರ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.