ಹಾವು ಏಣಿ ಆಟದಲ್ಲಿ ಗೆಲ್ತಾರಾ ರಮೇಶ್ ಕುಮಾರ್..?

Published : Mar 28, 2018, 11:24 AM ISTUpdated : Apr 11, 2018, 12:43 PM IST
ಹಾವು ಏಣಿ ಆಟದಲ್ಲಿ ಗೆಲ್ತಾರಾ ರಮೇಶ್ ಕುಮಾರ್..?

ಸಾರಾಂಶ

ರುಚಿರುಚಿಯಾದ ಮಾವು ಬೆಳೆಗೆ ಪ್ರಸಿದ್ಧಿಯಾಗಿರುವ  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ರಕ್ತಸಿಕ್ತ ರಾಜಕಾರಣದಿಂದ ಕುಖ್ಯಾತಿ ಗಳಿಸಿದೆ. ಅದು ಗ್ರಾಮ ಪಂಚಾಯಿತಿಗಾದರೂ ಇರಲಿ, ವಿಧಾನಸಭೆಗಾದರೂ ಇರಲಿ ಚುನಾವಣೆ ಎಂದರೆ ಇಲ್ಲಿ ಹೊಡೆದಾಟ, ರಕ್ತಪಾತ ಮಾಮೂಲಿ.

ಕೋಲಾರ : ರುಚಿರುಚಿಯಾದ ಮಾವು ಬೆಳೆಗೆ ಪ್ರಸಿದ್ಧಿಯಾಗಿರುವ  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ರಕ್ತಸಿಕ್ತ ರಾಜಕಾರಣದಿಂದ ಕುಖ್ಯಾತಿ ಗಳಿಸಿದೆ. ಅದು ಗ್ರಾಮ ಪಂಚಾಯಿತಿಗಾದರೂ ಇರಲಿ, ವಿಧಾನಸಭೆಗಾದರೂ ಇರಲಿ ಚುನಾವಣೆ ಎಂದರೆ ಇಲ್ಲಿ ಹೊಡೆದಾಟ, ರಕ್ತಪಾತ ಮಾಮೂಲಿ.

ಆದರೆ ಇತ್ತೀಚಿನ ದಿನಗಳಲ್ಲಿ ಹಿಂಸಾ ರಾಜ ಕಾರಣ ಕೊನೆಗೊಳ್ಳುತ್ತಿರುವ ಲಕ್ಷಣ ಕಂಡುಬಂದಿದೆ. ಕಳೆದ ಐದು ವರ್ಷದಲ್ಲಿ ಚುನಾವಣಾ ಹಿಂಸಾಚಾರಗಳು ಬಹುತೇಕ ಬಂದ್ ಆಗಿರುವುದು ಇದಕ್ಕೆ ಕಾರಣ.

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಸ್ವಕ್ಷೇತ್ರವಿದು. ಜೆಡಿಎಸ್‌ನ ವೆಂಕಟ ಶಿವಾರೆಡ್ಡಿ ಅವರು ಸಚಿವರಿಗೆ ಸಾಂಪ್ರದಾಯಿಕ ಎದುರಾಳಿ. 1983 ರಿಂದ ಈ ಇಬ್ಬರೂ ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾಗುತ್ತಲೇ ಇದ್ದಾರೆ. ರಮೇಶ್ ಕುಮಾರ್ 5 ಬಾರಿ, ವೆಂಕಟ ಶಿವಾರೆಡ್ಡಿ 4ಬಾರಿ ವಿಜೇತರಾಗಿದ್ದಾರೆ.

ಒಂದು ಅವಧಿಗೆ ರಮೇಶ್, ಮತ್ತೊಂದು ಅವಧಿಗೆ ರೆಡ್ಡಿ ಅವರನ್ನು ಆಯ್ಕೆ ಮಾಡುತ್ತಾ, ಇಬ್ಬರಿಗೂ ಅಧಿಕಾರವನ್ನು ನೀಡುವುದು ಇಲ್ಲಿನ ಮತದಾರರ ವಿಶೇಷ. ಇಬ್ಬರ ನಡುವಣ ಸೋಲು- ಗೆಲುವಿನ ಅಂತರ ಒಂದೂವರೆಯಿಂದ ಐದು ಸಾವಿರ ಮತಗಳ ಒಳಗೆ ಇರುತ್ತದೆ. ಈ ಕ್ಷೇತ್ರ ಒಂದು ರೀತಿ ವ್ಯಕ್ತಿಗತ ರಾಜಕಾರಣದ ಆಡುಂಬೊಲ. ರಮೇಶ್ ಕುಮಾರ್ ಹಾಗೂ ವೆಂಕಟಶಿವಾರೆಡ್ಡಿ ಯಾವುದೇ ಪಕ್ಷದಿಂದ ಸ್ಪರ್ಧಿಸಲಿ, ಪಕ್ಷ ಮುಖ್ಯವಾಗುವುದಿಲ್ಲ. ಕೋಲಾರ ಜಿಲ್ಲೆಯಲ್ಲೇ ಅತಿದೊಡ್ಡ ಕ್ಷೇತ್ರವಾಗಿರುವ ಶ್ರೀನಿವಾಸಪು ಈ ಬಾರಿ ಗೆಲುವು ತಮ್ಮ ಸರದಿ ಎಂಬ ಹುಮ್ಮಸ್ಸಿನೊಂದಿಗೆ ವೆಂಕಟಶಿವಾರೆಡ್ಡಿ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ, ಒಂದು ರೀತಿಯಲ್ಲಿ ಆಂಧ್ರದ ರಾಯಲಸೀಮ ರೀತಿಯದ್ದೇ ರಾಜ ಕಾರಣ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ದುರ್ಬಲವಾಗಿದೆ. ಈ ಬಾರಿ ಆ ಪಕ್ಷದಿಂದ ಡಾ| ವೇಣುಗೋಪಾಲ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಶ್ರೀನಿವಾಸಪುರದಲ್ಲಿ ಅಭ್ಯರ್ಥಿಗಳಷ್ಟೇ ಅಲ್ಲ, ಅವರನ್ನು ಬೆಂಬಲಿಸುವ ಕಾರ್ಯಕರ್ತರಲ್ಲೂ ಪರಸ್ಪರ ದ್ವೇಷ ಮನೆ ಮಾಡಿದೆ. ಒಬ್ಬರಿಗೊಬ್ಬರು ಸಂಪರ್ಕ ಇಟ್ಟುಕೊಳ್ಳುವುದಿಲ್ಲ, ಸಂಬಂಧ ಬೆಳೆಸುವ ಮಾತೇ ಇಲ್ಲ!

ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ: ಕ್ಷೇತ್ರದಲ್ಲಿ ಒಕ್ಕಲಿಗ, ಕುರುಬ, ದಲಿತ, ಅಲ್ಪಸಂಖ್ಯಾತ ಹಾಗೂ ಬಲಿಜ ಮತದಾರರು ಇದ್ದಾರೆ. ರಾಜಕೀಯವಾಗಿ ಒಕ್ಕಲಿಗ ಸಮುದಾಯ ಹೆಚ್ಚು ಪ್ರಾಬಲ್ಯ ಹೊಂದಿದೆ. ವೆಂಕಟಶಿವಾರೆಡ್ಡಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಒಕ್ಕಲಿಗರು ಅಧಿಕ ಪ್ರಮಾಣದಲ್ಲಿ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ.

ರಮೇಶ್ ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಒಕ್ಕಲಿಗರೂ ಸೇರಿದಂತೆ ಇತರೆ ಎಲ್ಲಾ ಜನಾಂಗದವರು ಅವರ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಇದ್ದು, ಸಮಬಲದ ಹೋರಾಟ ಖಚಿತವಾಗಿದೆ. ಸಚಿವರಾಗಿರುವ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅವರು ಸರ್ಕಾರದಿಂದ ಸಾಕಷ್ಟು ಅನುದಾನವನ್ನು ತಂದು ಕ್ಷೇತ್ರಕ್ಕೆ ಹರಿಸಿದ್ದಾರೆ. 18 ಸಾವಿರ ಮನೆಗಳನ್ನು ಬಡವರಿಗೆ ಒದಗಿಸಿದ್ದಾರೆ. ಡಿಸಿಸಿ ಬ್ಯಾಂಕ್ ನೆರವಿನಿಂದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸುಮಾರು ₹150 ಕೋಟಿಗೂ ಹೆಚ್ಚು ಸಾಲ ನೀಡಿದ್ದಾರೆ.

ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಕೆ.ಸಿ. ವ್ಯಾಲಿಯಿಂದ ಕೋಲಾರ ಜಿಲ್ಲೆಗೆ ನೀರು, ರಸ್ತೆ ಮತ್ತಿತರೆ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಚುನಾವಣೆ ಘೋಷಣೆ ಆದ ನಂತರ ಕ್ಷೇತ್ರದಲ್ಲಿ ಪ್ರಚಾರ ಮಾಡುವುದಿಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯ ಗಳಿಗೆ ಜನರೇ ಮತ ನೀಡುವ ನಿರೀಕ್ಷೆ ಇದೆ ಎಂದು ಹೇಳುವ ರಮೇಶ್ ಕುಮಾರ್ ಇದು ನನ್ನ ಕೊನೆಯ ಚುನಾವಣೆ ಎಂದೂ ಘೋಷಣೆ ಮಾಡಿದ್ದಾರೆ. ಅತ್ತ ವೆಂಕಟಶಿವಾ ರೆಡ್ಡಿಯೂ ಇದು ತಮಗೂ ಕೊನೆ ಚುನಾವಣೆ ಎಂದು ಹೇಳಿಕೊಂಡಿದ್ದಾರೆ. ಇದರ ಒಳಗಿನ ರಾಜಕೀಯ ಗಿಮಿಕ್ ಏನು ಅನ್ನುವುದು ಮತದಾರರಿಗೆ ಚುನಾವಣೆ ಮುಗಿಯುವ ವರೆಗೆ ಅರ್ಥವಾಗುವುದು ಕಷ್ಟ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!