
ನವದೆಹಲಿ: ಭಾರತ-ಶ್ರೀಲಂಕಾ ನಡುವಿನ ರಾಮಸೇತುವಿನ ಇರುವಿಕೆ ಬಗ್ಗೆ ಭಾರತದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, ಡಿಸ್ಕವರಿಯ ‘ಸೈನ್ಸ್ ಚಾನೆಲ್’ನಲ್ಲಿ ಬುಧವಾರ ಸಂಜೆ 7.30ಕ್ಕೆ ರಾಮಸೇತುವಿನ ಬಗ್ಗೆ ವಿಶೇಷ ಕಾರ್ಯಕ್ರಮವೊಂದು ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ, ಅಮೆರಿಕದ ಪುರಾತತ್ವ ತಜ್ಞರು ರಾಮಸೇತು ಎಂಬುದು ಮಾನವನಿರ್ಮಿತ ಎಂದು ಹೇಳಿರುವ ಪ್ರಚಾರದ ಪ್ರೋಮೋ ಈಗ ಬಿಡುಗಡೆಯಾಗಿದ್ದು, ವೈರಲ್ ಆಗಿದೆ.
ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 50 ಕಿ.ಮೀ. ಅಂತರದಲ್ಲಿ ಈ ಸೇತುವೆ ಚಾಚಿಕೊಂಡಿದೆ. ಇದು ಮಾನವನಿರ್ಮಿತ ಎಂದು ಅಮೆರಿಕದ ಪುರಾತತ್ವ ತಜ್ಞರು ಹೇಳಿದ್ದು, ಈ ಪ್ರೋಮೋವನ್ನು 11 ಲಕ್ಷ ಜನ ವೀಕ್ಷಿಸಿದ್ದಾರೆ.
ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ಈ ಪ್ರೋಮೋವನ್ನು ಟ್ವೀಟ್ ಮಾಡಿ, ‘ಜೈ ಶ್ರೀರಾಂ’ ಎಂದು ನಮಸ್ಕಾರದ ಎರಡು ಚಿತ್ರಗಳನ್ನು ಹಾಕಿದ್ದಾರೆ.
ರಾಮಸೇತುವನ್ನು ಒಡೆದು ಸೇತುಸಮುದ್ರಂ ಹಡಗು ಯೋಜನೆಯನ್ನು ಯುಪಿಎ-1 ಸರ್ಕಾರವು 2005ರಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಆದರೆ ಇದು ಶ್ರೀರಾಮನು ಲಂಕೆಗೆ ತೆರಳುವಾಗ ವಾನರ ಸೇನೆ ನಿರ್ಮಿಸಿದ್ದು, ಇದನ್ನು ಒಡೆಯಬಾರದು ಎಂದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.