ಸೂಪರ್'ಸ್ಟಾರ್ ರಜನೀಕಾಂತ್ ಪಕ್ಷಕ್ಕೆ ಬೆಂಗಳೂರಿನಲ್ಲಿ ಸ್ಕೆಚ್

By Suvarna Web DeskFirst Published May 30, 2017, 9:59 AM IST
Highlights

ಸಕ್ರಿಯ ರಾಜಕಾರಣ ಪ್ರವೇಶಿಸಲು ಸಜ್ಜಾಗಿರುವ ನಟ ರಜನೀಕಾಂತ್‌, ಇದಕ್ಕೆ ಸಹಾಯ ಪಡೆಯಲು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮೊರೆ ಹೋಗಿದ್ದಾರೆ.
ತಮಿಳುನಾಡಿನ ಜನರು ಮತದಾನ ಮಾಡುವ ರೀತಿ ಹಾಗೂ ತಾವು ಸಕ್ರಿಯ ರಾಜಕಾರಣಕ್ಕೆ ಇಳಿದರೆ ಯಾವ ಅಜೆಂಡಾವನ್ನು ಇಟ್ಟುಕೊಂಡು ಮತದಾರರನ್ನು ಸೆಳೆಯಬೇಕು ಎಂಬುದನ್ನು ಅರಿಯುವ ಜವಾಬ್ದಾರಿಯನ್ನು ಬೆಂಗಳೂರಿನ ಸಂಸ್ಥೆಯೊಂದಕ್ಕೆ ವಹಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಚೆನ್ನೈ(ಮೇ.30): ಸಕ್ರಿಯ ರಾಜಕಾರಣ ಪ್ರವೇಶಿಸಲು ಸಜ್ಜಾಗಿರುವ ನಟ ರಜನೀಕಾಂತ್‌, ಇದಕ್ಕೆ ಸಹಾಯ ಪಡೆಯಲು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮೊರೆ ಹೋಗಿದ್ದಾರೆ.
ತಮಿಳುನಾಡಿನ ಜನರು ಮತದಾನ ಮಾಡುವ ರೀತಿ ಹಾಗೂ ತಾವು ಸಕ್ರಿಯ ರಾಜಕಾರಣಕ್ಕೆ ಇಳಿದರೆ ಯಾವ ಅಜೆಂಡಾವನ್ನು ಇಟ್ಟುಕೊಂಡು ಮತದಾರರನ್ನು ಸೆಳೆಯಬೇಕು ಎಂಬುದನ್ನು ಅರಿಯುವ ಜವಾಬ್ದಾರಿಯನ್ನು ಬೆಂಗಳೂರಿನ ಸಂಸ್ಥೆಯೊಂದಕ್ಕೆ ವಹಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದೇ ವೇಳೆ, ರಾಜಕೀಯ ಪ್ರವೇಶ ಕುರಿತು ಕಳೆದ ವಾರವಷ್ಟೇ ಹಿತೈಷಿಗಳು ಹಾಗೂ ಆಪ್ತಸ್ನೇಹಿತರ ಜತೆ ಸಭೆಗಳನ್ನು ರಜನೀಕಾಂತ್‌ ನಡೆಸಿದ್ದಾರೆ. ಯಾವುದೇ ರಾಜಕೀಯ ಪಕ್ಷ ಸೇರುವ ಬದಲು ಹೊಸ ರಾಜಕೀಯ ಪಕ್ಷ ಕಟ್ಟಿ, 2019ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಒಲವನ್ನು ಅವರು ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

ತಮ್ಮ ನಾಮಬಲ ಹಾಗೂ ಪ್ರಭಾವದಿಂದಲೇ ಅಧಿಕಾರ ಲಭಿಸುತ್ತದೆ ಎಂಬ ಯಾವ ಖಾತ್ರಿಯನ್ನೂ ರಜನೀಕಾಂತ್‌ ಹೊಂದಿಲ್ಲ. ಇದೇ ಕಾರಣಕ್ಕೆ ತಮಿಳುನಾಡಿನ ಡಿಎಂಕೆ, ಅಣ್ಣಾಡಿಎಂಕೆ ಹಾಗೂ ಕಾಂಗ್ರೆಸ್ಸಿನಲ್ಲಿ ಕಡೆಗಣಿಸಲ್ಪಟ್ಟಿರುವ ಪ್ರಭಾವಿ ನಾಯಕರಿಗೆ ಗಾಳ ಹಾಕಲು ಆರಂಭಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅಣ್ಣಾಡಿಎಂಕೆಯಲ್ಲಿ ನಡೆದ ಒಳಜಗಳದ ಸಂದರ್ಭ ಶಶಿಕಲಾ ಬಣ ತೊರೆದು ಪನ್ನೀರ್‌ಸೆಲ್ವಂ ಬಣಕ್ಕೆ ಜಿಗಿದಿದ್ದ ಮಾಜಿ ಶಾಲಾ ಶಿಕ್ಷಣ ಮಂತ್ರಿ ಎಂ.ಎಫ್‌. ಪಾಂಡಿಯರಾಜನ್‌ ಈಗ ಪನ್ನೀರ್‌ಸೆಲ್ವಂ ಜತೆಗೂ ಮುನಿಸಿಕೊಂಡಿದ್ದಾರೆ. ಅವರನ್ನು ಸೆಳೆಯುವ ನಿಟ್ಟಿನಲ್ಲಿ ರಜನೀ ತಂಡ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.

ಯುವಕರ ಮತದ್ದೇ ರಜನಿಗೆ ಚಿಂತೆ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ಎನಿಸಿಕೊಂಡಿದ್ದರೂ, ಅಪಾರ ಅಭಿಮಾನಿ ವರ್ಗ ಹೊಂದಿದ್ದರೂ ತಮ್ಮಿಂದಲೇ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಎಂದು ರಜನೀಕಾಂತ್‌ ಅವರಿಗೆ ಗೊತ್ತಿದೆ ಎನ್ನಲಾಗಿದೆ. ರಜನಿ ಅವರ ಅಭಿಮಾನಿಗಳು ಮಧ್ಯವಯಸ್ಕರು ಅಥವಾ 50ರ ಪ್ರಾಯದ ಆಜುಬಾಜಿನವರು. ಯುವಕರು ಹಾಗೂ ಬಿಜೆಪಿ ಜತೆ ಕೈಜೋಡಿಸಿದರೆ ಮುಸ್ಲಿಮರು ಯಾರಿಗೆ ಮತ ಹಾಕುತ್ತಾರೆ ಎಂಬುದನ್ನು ಊಹಿಸಲು ಆಗುತ್ತಿಲ್ಲ. ಹೀಗಾಗಿ ತಮ್ಮ ನಾಮಬಲದಿಂದ ಶೇ.10ರಷ್ಟುಮತ ಬರಬಹುದು ಎಂಬ ಅಂದಾಜನ್ನು ರಜನೀ ಹೊಂದಿದ್ದಾರೆ ಎನ್ನಲಾಗಿದೆ.

ರಜನಿ ಜೀಪ್‌ ಮೇಲೂ ಮಹೀಂದ್ರಾ ಕಣ್ಣು

ಇತ್ತೀಚೆಗಷ್ಟೇ ಬಿಡುಗಡೆಯಾದ ನಟ ರಜನೀಕಾಂತ್‌ ಅವರ ಹೊಸ ಚಿತ್ರ ‘ಕಾಲ ಕರಿಕಾಲನ್‌'ನ ಪೋಸ್ಟರ್‌ನಲ್ಲಿದ್ದ ಜೀಪ್‌ನ ಮೇಲೆ ಮಹೀಂದ್ರಾ ಕಂಪನಿಯ ಮಾಲೀಕ ಆನಂದ್‌ ಮಹೀಂದ್ರಾ ಅವರ ಕಣ್ಣು ಬಿದ್ದಿದೆ. ಯಾರಿಗಾದರೂ, ಈ ಜೀಪ್‌ ಎಲ್ಲಿದೆ ಎಂದು ಗೊತ್ತಿದ್ದರೆ ತಿಳಿಸಿ, ಅದನ್ನು ನಮ್ಮ ಆಟೋ ಮ್ಯೂಸಿಯಂಗಾಗಿ ಖರೀದಿಸಲು ಬಯಸಿದ್ದೇನೆ ಎಂದು ಆನಂದ್‌ ಟ್ವೀಟ್‌ ಮಾಡಿದ್ದಾರೆ. ಮಹೀಂದ್ರಾ ಕಂಪನಿಯ ಥಾರ್‌ ಜೀಪ್‌ ಅನ್ನೇ ರಜನಿ ಚಿತ್ರಕ್ಕಾಗಿ ಈ ರೀತಿ ಮಾರ್ಪಡಿಸಲಾಗಿತ್ತು. ಇತ್ತೀಚೆಗಷ್ಟೇ ಕೇರಳದ ಆಟೋ ಚಾಲಕನೊಬ್ಬ ತನ್ನ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ರೀತಿಯಲ್ಲಿ ಬದಲಾಯಿಸಿದ್ದನ್ನು ಮೆಚ್ಚಿಕೊಂಡಿದ್ದ ಆನಂದ್‌, ಆ ಆಟೋ ಪಡೆದು, ಅದರ ಬದಲಿಗೆ ಮಹೀಂದ್ರಾ ಸುಪ್ರೋ ವಾಹನವನ್ನು ಉಚಿತವಾಗಿ ನೀಡಿದ್ದರು.

click me!