
ಚೆನ್ನೈ(ಮೇ.23): ಸಕ್ರಿಯ ರಾಜಕಾರಣ ಪ್ರವೇಶಿಸುವ ಕುರಿತು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ಅವರು ಸ್ಪಷ್ಟಸುಳಿವು ನೀಡಿದ ಬೆನ್ನಲ್ಲೇ ಅವರು ರಾಜಕಾರಣಿಯಾಗುವುದಕ್ಕೆ ತಮಿಳುನಾಡಿನಲ್ಲಿ ಆಗಲೇ ವಿರೋಧ ವ್ಯಕ್ತವಾಗಲು ಆರಂಭವಾಗಿದೆ.
ತಮಿಳುನಾಡನ್ನು ತಮಿಳರೇ ಆಳಬೇಕು. ಕನ್ನಡಿಗರಾಗಿರುವ ರಜನೀಕಾಂತ್ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಬಾರದು ಎಂದು ಆಗ್ರಹಿಸಿ ತಮಿಳಾರ್ ಮುನ್ನೇತ್ರ ಪದೈ ಎಂಬ ತಮಿಳು ಪರ ಸಂಘಟನೆ ಸೋಮವಾರ ರಜನೀಕಾಂತ್ ಅವರ ಚೆನ್ನೈ ನಿವಾಸದ ಮುಂದೆ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರನ್ನು ಚದುರಿಸಲಾಗಿದೆ. ಆದರೂ ಅವರು ಘೋಷಣೆ ಕೂಗಿ ರಜನೀ ರಾಜಕೀಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ರಜನೀಕಾಂತ್ ಅವರ ನಿವಾಸಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಜನೀ ರಾಜಕೀಯ ಸೇರ್ಪಡೆಗೆ ವಿರೋಧ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. ರಜನೀ ಏನಾದರೂ ಅಂತಹ ನಿರ್ಧಾರ ಕೈಗೊಂಡರೆ ಮೊದಲು ವಿರೋಧಿಸುವ ವ್ಯಕ್ತಿ ತಾವು. ಏಕೆಂದರೆ ಉದ್ಯೋಗಕ್ಕಾಗಿ ತಮಿಳುನಾಡಿಗೆ ಬಂದಿರುವ ಕನ್ನಡಿಗ ಅವರು ಎಂದು ಕಳೆದ ಜನವರಿಯಲ್ಲೇ ಚಿತ್ರನಟ ಹಾಗೂ ರಾಜಕಾರಣಿ ಶರತ್ ಕುಮಾರ್ ಹೇಳಿದ್ದರು.
ಶುಕ್ರವಾರವಷ್ಟೇ ಅಭಿಮಾನಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನೀಕಾಂತ್ ಅವರು ಸಕ್ರಿಯ ರಾಜಕಾರಣ ಪ್ರವೇಶಿಸುವ ಸುಳಿವು ನೀಡಿದ್ದರು. ಜತೆಗೆ ತಮಗೆ 67 ವರ್ಷ ವಯಸ್ಸಾಗಿದೆ. ಆ ಪೈಕಿ ಕರ್ನಾಟಕದಲ್ಲಿ 23 ವರ್ಷ ಹಾಗೂ ತಮಿಳುನಾಡಿನಲ್ಲಿ 43 ವರ್ಷ ಜೀವಿಸಿದ್ದೇನೆ. ನಾನೊಬ್ಬ ನೈಜ ತಮಿಳಿಗ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.