ಬೆಂಗಳೂರಲ್ಲಿ ಮಾದಕ ವಸ್ತು ಪೂರೈಕೆ ಹೆಚ್ಚಳ : ಆರ್‌ಸಿ

By Kannadaprabha NewsFirst Published Jul 20, 2018, 11:16 AM IST
Highlights

ಡ್ರಗ್ಸ್ ಪೂರೈಕೆ, ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟಲು ಕಠಿಣ ಶಿಕ್ಷೆಯನ್ನು ಒಳಗೊಂಡ ಕಾನೂನು ಮತ್ತು ರಾಷ್ಟ್ರೀಯ ಮಟ್ಟದ ಬಲಿಷ್ಠ ಯೋಜನೆಯೊಂದರ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್  ಚಂದ್ರಶೇಖರ್ ಒತ್ತಾಯಿಸಿದ್ದಾರೆ.

"ನವದೆಹಲಿ :  ಡ್ರಗ್ಸ್ ಪೂರೈಕೆ, ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟಲು ಕಠಿಣ ಶಿಕ್ಷೆಯನ್ನು ಒಳಗೊಂಡ ಕಾನೂನು ಮತ್ತು ರಾಷ್ಟ್ರೀಯ ಮಟ್ಟದ ಬಲಿಷ್ಠ ಯೋಜನೆಯೊಂದರ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್  ಚಂದ್ರಶೇಖರ್ ಒತ್ತಾಯಿಸಿದ್ದಾರೆ. ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, ನಾರ್ಕೋಟೀಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಳೆದ ಎರಡು ವರ್ಷದಲ್ಲಿ ಬೆಂಗಳೂರು ನಗರದಲ್ಲಿ ಡ್ರಗ್ಸ್ ಬಳಕೆ ಅವ್ಯಾಹತವಾಗಿದೆ ಎಂಬುದರ ಸ್ಪಷ್ಟ ಸೂಚನೆಯನ್ನು ನೀಡಿದೆ. ಎನ್‌ಸಿಬಿಯ ಬೆಂಗಳೂರು ವಲಯದ ಅಧಿಕಾರಿಗಳು ಇದೇ ಫೆಬ್ರವರಿಯಲ್ಲಿ ಬಸ್ ನಿಲ್ದಾಣ ಒಂದರಲ್ಲಿ 36.6 ಕೇಜಿ ಹಾಗೂ ಮತ್ತೊಂದು ಬಸ್ ನಿಲ್ದಾಣದಲ್ಲಿ 28.060 ಕೇಜಿ
ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಇವು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಮಾದಕ ವಸ್ತುಗಳ ಪ್ರಮುಖ ಪ್ರಕರಣಗಳಾಗಿದ್ದು, ಡ್ರಗ್ಸ್ ಪೂರೈಕೆ ಮತ್ತು ಬಳಕೆ ಹೆಚ್ಚುತ್ತಿರುವ ಸಂಕೇತವಾಗಿದೆ ಎಂದು ರಾಜ್ಯಸಭೆಯ ಗಮನಕ್ಕೆ ತಂದರು. ನಿಮ್ಹಾನ್ಸ್ ಆತಂಕ: ಡ್ರಗ್ಸ್ ಚಟದಿಂದ ಹೊರಬರಲು ಆಪ್ತ ಸಮಾಲೋಚನೆಗೆ ತಮ್ಮಲ್ಲಿಗೆ ಆಗಮಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯಗಳ ಸಂಸ್ಥೆ ಮತ್ತು ನಿಮ್ಹಾನ್ಸ್ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಎನ್‌ಸಿಬಿಯ ಪ್ರಕಾರ, ಯುವ ಜನತೆ ಡ್ರಗ್ಸ್‌ಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಡ್ರಗ್ಸ್ ಪೂರೈಕೆದಾರರು ಇದನ್ನು ಅರಿತುಕೊಂಡು ಯುವಕ- ಯುವತಿಯರನ್ನು ತಮ್ಮ ಗುರಿಯನ್ನಾಗಿಸಿಕೊಂಡಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು. ಇಡೀ ದಕ್ಷಿಣ ಭಾರತ ಆವರಿಸಿದೆ: ಡ್ರಗ್ಸ್ ಪೂರೈಕೆದಾರರ ಜಾಲ ಬೆಂಗಳೂರು ಮಾತ್ರವಲ್ಲದೇ ಇಡೀ ದಕ್ಷಿಣ ಭಾರತ ದಲ್ಲಿ ವ್ಯವಸ್ಥಿತವಾಗಿ ಹೆಣೆದುಕೊಂಡಿದೆ. ಪರಿಸ್ಥಿತಿ ಕೈಮೀ ರುವ ಮೊದಲು ಮತ್ತು ಹೊಸ ಪೀಳಿಗೆ ಸಂಪೂರ್ಣವಾಗಿ ಮಾದಕ ವಸ್ತುಗಳ ದಾಸರಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಡ್ರಗ್ಸ್ ಹಾವಳಿಯ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿ ನಡೆದ ಚರ್ಚೆಯನ್ನು ಕೂಡ ರಾಜೀವ್ ಚಂದ್ರಶೇಖರ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. 

 

click me!