Raita Ratna Award 2022: ಪರಿಸರ ಸ್ನೇಹಿ ಬದುಕಿನ ಪಾಠ ಹೇಳುವ ಅನ್‌ಮೋಲ್‌ ಶಾಲೆ

By Govindaraj S  |  First Published Apr 9, 2022, 11:19 AM IST

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ದಾವಣಗೆರೆಯ ಶಿರಮಗೊಂಡನಹಳ್ಳಿಯ ಅನ್‌ಮೋನ್‌ ಶಾಲೆಗೆ ಸಂದಿದೆ. ಮಾದರಿ ಶಾಲೆಗೆ ಗೌರವ ಸಮರ್ಪಣೆ.


ನಾಗರಾಜ ಎಸ್‌.ಬಡದಾಳ್‌

ಕೃಷಿ, ಹೈನುಗಾರಿಕೆ, ತೋಟಗಾರಿಕೆ ತರಬೇತಿಗೆಂದೇ ವಾರದಲ್ಲಿ 1 ಗಂಟೆ ಮೀಸಲಿಡುತ್ತಾ, ವಿದ್ಯೆಯ ಜೊತೆಗೆ ಪರಿಸರ ಸ್ನೇಹಿ ಬದುಕಿನ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಶಾಲೆ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಅನ್‌ಮೋಲ್‌ ವಿದ್ಯಾಸಂಸ್ಥೆ. ಇದು ಕಳೆದ ಒಂದೂವರೆ ದಶಕದಿಂದ ಇಂಥದ್ದೊಂದು ಮಾದರಿ ಕಾರ್ಯ ಮಾಡುತ್ತಿದೆ. ಶಿರಮಗೊಂಡನಹಳ್ಳಿ ಗ್ರಾಮದಲ್ಲಿ 2005ರಲ್ಲಿ ಆರಂಭವಾದ ಈ ಶಾಲೆ ಈವರೆಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಪರಿಸರ ಸ್ನೇಹಿ ಬದುಕಿನ ಬಗ್ಗೆ ಒಲವು, ಆಸಕ್ತಿ ಮೂಡಿಸುತ್ತಿದೆ. 

Latest Videos

undefined

ಸ್ವತಃ ಸಂಸ್ಥೆಯ ಆಡಳಿತ ಮಂಡಳಿಯ ಬಹುತೇಕ ಪದಾಧಿಕಾರಿಗಳು ರೈತಾಪಿ ಕುಟುಂಬ, ಗ್ರಾಮೀಣ ಹಿನ್ನೆಲೆಯವರಾಗಿರುವುದೂ ಇದಕ್ಕೆ ಕಾರಣ. ಮಕ್ಕಳಲ್ಲಿ ಕೃಷಿ ಜಾಗೃತಿಗಾಗಿ ತರಕಾರಿ, ಸೊಪ್ಪು ಬೆಳೆಯುವ, ಬೇಸಾಯ, ಹೈನುಗಾರಿಕೆ, ಬತ್ತದ ಬೆಳೆ ಹೀಗೆ ನಾನಾ ರೀತಿ ಚಟುವಟಿಕೆಗಳಲ್ಲಿ ತೊಡಗುವಂತೆ ವಾರದಲ್ಲಿ ಒಂದು ಗಂಟೆ ಕಾಲ ಮೀಸಲಿಡಲಾಗುತ್ತದೆ. ಅನುಭವಿಗಳು ಮಕ್ಕಳಿಗೆ ತರಬೇತಿ ನೀಡುತ್ತಾರೆ. ಪಾಠದ ನಡುವೆ ಬಿಡುವಿದ್ದರೂ ಮಕ್ಕಳು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅನ್‌ಮೋಲ್‌ ವಿದ್ಯಾಸಂಸ್ಥೆಯ ಮುಖ್ಯಸ್ಥ ಸಿ.ಜಿ.ದಿನೇಶ ಅವರ ಪರಿಕಲ್ಪನೆಯಿದು. 

150 ಕ್ಕೂ ಹೆಚ್ಚು ಅಪ್ಪೆ ಮಿಡಿ ಸಂಶೋಧಿಸಿದ ಸಾಗರ ತಾಲೂಕು ಬೇಳೂರಿನ ಕೃಷಿಕ ಸುಬ್ಬಣ್ಣ ಹೆಗಡೆ

ಮಕ್ಕಳ ಶೈಕ್ಷಣಿಕ ಪ್ರಗತಿ ಜೊತೆ ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವುದು ಸಂಸ್ಥೆ ಧ್ಯೇಯ. ಶಾಲೆಯಲ್ಲಿ ಡೈರಿ ಫಾರಂ ಇದ್ದು, 20ಕ್ಕೂ ಹೆಚ್ಚು ಹಸುಗಳಿವೆ. ಶಾಲೆಯ ಮಕ್ಕಳಿಗೆ ನಿತ್ಯ ಇದೇ ಹಾಲನ್ನೇ ಬಳಸಲಾಗುತ್ತದೆ. ಇಲ್ಲಿ ಸೊಪ್ಪು, ತರಕಾರಿ ಬೆಳೆಯಲಾಗುತ್ತದೆ. ರಾಸುಗಳ ಸೆಗಣಿಯಿಂದ ಗೋಬರ್‌ ಗ್ಯಾಸ್‌ ತಯಾರಾಗುತ್ತದೆ. ಸೆಗಣಿ, ಗೋಮೂತ್ರದಿಂದ ಗೊಬ್ಬರ ತಯಾ​ರಿ​ಸ​ಲಾ​ಗು​ತ್ತ​ದೆ. ಇಂತಹ ಚಟುವಟಿಕೆಯಿಂದ ಸಂಸ್ಥೆಯ ಆರ್ಥಿಕ ಹೊರೆಯೂ ಕಡಿಮೆಯಾಗುತ್ತಿದೆ. ಮಕ್ಕಳೂ ಸ್ವಾವಲಂಬಿಗಳಾಗುತ್ತಾರೆ ಎಂಬುದು ಈ ಶಾಲೆಯ ಆಡಳಿತ ಮಂಡಳಿಯವರ ಅಭಿಪ್ರಾಯ.ಶಾಲಾ ಕ್ಯಾಂಪಸ್‌ನಲ್ಲಿ 750 ವಿವಿಧ ಗಿಡ, ಮರಗಳನ್ನು ನೆಡಲಾಗಿದೆ. 

ಮಕ್ಕಳೇ ವಾರಕ್ಕೊಮ್ಮೆ ಶ್ರಮದಾನ ಮಾಡಿ, ಕಳೆ ತೆಗೆಯುವುದು, ನಾಟಿ ಮಾಡುವುದು, ನೀರು ಹಾಕುವುದು ಇತ್ಯಾದಿ ಕೆಲಸ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಇದೆ. ಪ್ರತಿ ವರ್ಷ 200 ಮಕ್ಕಳಂತೆ ಈವರೆಗೆ ಸುಮಾರು 3 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕೃಷಿ, ತೋಟಗಾರಿಕೆ, ಪರಿಸರ ಸ್ನೇಹಿ ಬದುಕಿನ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡಿದ ಸಂತೃಪ್ತಿ ಸಂಸ್ಥೆಯದ್ದು.  

Raita Ratna Award 2022 ಮಕ್ಕಳಿಗೆ ಕೃಷಿ ಪಾಠ ಕಲಿಸಿದ ಮಿತ್ತೂರು ಸರ್ಕಾರಿ ಶಾಲೆ!

ಮಕ್ಕಳ ಪರಿಸರ ಸ್ನೇಹಿ ಮನೋಭಾವ ಪೋಷಕರ ಸಂತಸಕ್ಕೂ ಕಾರಣವಾಗಿದೆ. ಶೈಕ್ಷಣಿಕ ಚಟುವಟಿಕೆ ಜೊತೆಗೆ ಕೃಷಿ, ತೋಟಗಾರಿಕೆ, ಪರಿಸರ ಸ್ನೇಹಿ ಬದುಕಿನ ಪಾಠವನ್ನೂ ಕಲಿಸುವ ಸಂಸ್ಥೆಯ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ವಂಡರ್‌ ಲಾ ಸಂಸ್ಥೆಗಳ ಪರಿಸರ ಸ್ನೇಹಿ ಪ್ರಶಸ್ತಿಗಳು ಸಂಸ್ಥೆಗೆ ಲಭಿಸಿದೆ. ಆಡಳಿತ ಮಂಡಳಿ, ಶಾಲೆ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಸೇರಿ ಪರಿಸರ ಸ್ನೇಹಿ ಶಾಲೆಗೆ ಕಾರಣವಾಗಿದ್ದಾರೆ. ಗೋಬರ ಗ್ಯಾಸ್‌, ಸೋಲಾರ್‌ ವಾಟರ್‌ ಹೀಟರ್‌, ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಇಲ್ಲಿದೆ. ಮಕ್ಕಳಿಗೆ ಬದುಕಿನ ಪಾಠ ಕಲಿಸುವ ಈ ವಿಶಿಷ್ಟಶಾಲೆ ಮಾದರಿಯಾಗಿ ಬೆಳೆದು ನಿಂತಿದೆ.

"

click me!