Raita Ratna award 2022: 13 ವರ್ಷಗಳಿಂದ ದೇಸಿ ಹೈನೋದ್ಯಮದಲ್ಲಿ ಸಾಧನೆ ಮೆರೆದ ಕೆ.ಡಿ. ಕುಮಾರ್‌

By Kannadaprabha News  |  First Published Apr 5, 2022, 10:38 AM IST

ಕೊಡಗು ಜಿಲ್ಲೆ ಸೋಮವಾರ ಪೇಟೆಯ ಕುಸುಬೂರು ಗ್ರಾಮದ ರೈತ ಕೆ ಡಿ ಕುಮಾರ್‌. ಇವರು ಗಿರ್‌ ತಳಿಯ ಹಸು ಸಾಕಣೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ್ದಾರೆ.


ಮುರಳೀಧರ್‌ ಶಾಂತಳ್ಳಿ

ಕಳೆದ 13 ವರ್ಷಗಳಿಂದ ಗುಜರಾತ್‌ ರಾಜ್ಯದ ಗಿರ್‌ ಹಸು ತಳಿಯನ್ನು ತಮ್ಮೂರಾದ ಕೊಡಗು ಜಿಲ್ಲೆ ಸೋಮವಾರ ಪೇಟೆಯ ಕುಸುಬೂರು ಗ್ರಾಮದಲ್ಲಿ ಸಾಕಣೆ ಮಾಡುತ್ತಿರುವ ರೈತ ಕೆ ಡಿ ಕುಮಾರ್‌. ಪದವಿ ಮುಗಿಸಿದ ನಂತರ, 25 ವರ್ಷಗಳ ಹಿಂದೆ ಕಾಫಿ ಉದ್ಯಮಕ್ಕೆ ಪ್ರವೇಶಿಸಿ ಕ್ಯೂರಿಂಗ್‌ ವರ್ಕ್ಸ್‌ ಆರಂಭಿಸಿ ಯಶ ಕಂಡವರು. ಬಾಲ್ಯದಿಂದಲೂ ಪಶುಸಂಗೋಪನೆಯಲ್ಲಿ ಇದ್ದ ಆಸಕ್ತಿಯಿಂದ ದಶಕದ ಕೆಳಗೆ ಗುಜರಾತ್‌ನ ಗಿರ್‌ ತಳಿಯ ಹಸುಗಳ ಸಾಕಣೆ ಆರಂಭಿಸಿದರು.

Tap to resize

Latest Videos

ನಿತ್ಯ 27-30 ಲೀಟರ್‌ ಹಾಲು ಕೊಡುತ್ತಿರುವ ಗಿರ್‌ ಹಸುಗಳು ಮೃದು ಸ್ವಭಾವದವಾಗಿದ್ದು, ಎಲ್ಲಾ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತವೆ. ಉತ್ಕೃಷ್ಟದರ್ಜೆಯ ಹಾಲು ನೀಡುವ ಈ ಹಸುಗಳ ಹಾಲಿಗೆ ನಗರ ಪ್ರದೇಶದಲ್ಲಿ ಉತ್ತಮ ಮಾರುಕಟ್ಟೆಯಿದೆ. ಈ ಹಸುಗಳ ಹಾಲಿನಿಂದ ತಯಾರಿಸುವ ಮೊಸರು, ತುಪ್ಪ, ಸೆಗಣಿ, ಗಂಜಳಗಳಿಗೂ ಅಪಾರ ಬೇಡಿಕೆ ಇದೆ. ಇದಕ್ಕೆ ಕಾರಣ ಇವುಗಳಲ್ಲಿರುವ ರೋಗ ನಿರೋಧಕ ಅಂಶ ಹಾಗೂ ಔಷಧೀಯ ಗುಣ. ಆದರೆ ನಗರ ಪ್ರದೇಶದಲ್ಲಿರುವ ಈ ಬೇಡಿಕೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಈ ಹಸುಗಳ ಹಾಲಿಗೆ ಗ್ರಾಮೀಣ ಭಾಗದಲ್ಲೂ ಮಾರುಕಟ್ಟೆಸೃಷ್ಟಿಸುವ ನಿಟ್ಟಿನಲ್ಲಿ ಕುಮಾರ್‌ ಗಿರ್‌ ಹಸು ಸಾಕಣೆ ಆರಂಭಿಸಿದರು. ಕೊಡಗಿನಲ್ಲಿ ಪ್ರಥಮವಾಗಿ ಈ ತಳಿಯನ್ನು ತಂದು ಬೆಳೆಸಿದ ಇವರ ಬಳಿ ಇದೀಗ 27 ಹಸುಗಳು ಇವೆ.

ಕನ್ನಡ ಪ್ರಭ ಮತ್ತು ಸುವರ್ಣನ್ಯೂಸ್‌ ರೈತ ರತ್ನ ಪ್ರಶಸ್ತಿ ನೀಡುವುದರ ಮೂಲಕ ರಾಜ್ಯದ ಮೂಲೆಮೂಲೆಗಳಲ್ಲಿ ಎಲೆ ಮರೆಯ ಕಾಯಿಗಳಂತೆ ಕೃಷಿ, ಪಶುಸಂಗೋಪನೆ ಸೇರಿದಂತೆ ಹಲವು ಕಾಯಕದಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಗುರುತಿಸಿ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುತ್ತಿರುವುದು, ಸಮಾಜಮುಖಿ ಚಿಂತನೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. - ಕೆ.ಡಿ. ಕುಮಾರ್‌, ರೈತ ರತ್ನ ಪ್ರಶಸ್ತಿ ಪುರಸ್ಕೃತ ಕೃಷಿಕ

ನಗರ ಪ್ರದೇಶಗಳಲ್ಲಿ ಗಿರ್‌ ಹಸುಗಳ ಹಾಲಿಗೆ ಲೀಟರ್‌ಗೆ ರು. 150 ಇದೆ. ಆದರೆ ಗ್ರಾಮೀಣ ಭಾಗದ ಜನರಿಗೂ ಈ ಉತೃಷ್ಟಹಾಲು ಕೈಗೆಟುಕಬೇಕು ಅನ್ನುವ ಉದ್ದೇಶದಿಂದ ಕುಮಾರ್‌ ಅವರು 80 ರೂಪಾಯಿಗೆ ಈ ಹಾಲನ್ನು ಮಾರಾಟ ಮಾಡುತ್ತಾರೆ. ತುಪ್ಪಕ್ಕೆ ಕೆಜಿಗೆ ರು. 2500-2800 ಇದೆ. ಈ ಹಸುಗಳ ನಿರ್ವಹಣೆಯೂ ಸುಲಭ. ‘ಗ್ರಾಮೀಣ ಪ್ರದೇಶಗಳಲ್ಲಿ ಗಿರ್‌ ತಳಿಯನ್ನು ಹೆಚ್ಚು ಪ್ರಚಾರ ಮಾಡಿ ಮುಂದಿನ ದಿನಗಳಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇನೆ’ ಎಂದು ಕುಮಾರ್‌ ಹೇಳುತ್ತಾರೆ. ಸ್ಥಳೀಯವಾಗಿ ಕ್ರಾಸಿಂಗ್‌ ಮಾಡಿಸಿದ 100ಕ್ಕೂ ಹೆಚ್ಚು ಕರುಗಳು ಗ್ರಾಮದಲ್ಲಿವೆ. ಯಾವ ರೈತರು ಬಂದರೂ ಮಾಹಿತಿ ನೀಡಲು ಸದಾ ಸಿದ್ಧವಿರುವ ಇವರು ಗುಜರಾತ್‌ಗೆ ಹಲವಾರು ಬಾರಿ ಭೇಟಿ ನೀಡಿ ಮಾಹಿತಿ ಪಡೆದು ಯಶಸ್ವಿ ಹೈನುಗಾರಿಕೆ ನಡೆಸುತ್ತಿದ್ದಾರೆ.

Raita Ratna Award 2022 ನಮ್ಮೂರ ಜನರಿಗೆ ವಿದೇಶಿ ಹಣ್ಣಿನ ರುಚಿ ತೋರಿಸಿದ ರಾಜೇಂದ್ರ ಹಿಡ್ಲುಮನೆ

ಪದವಿ ಮುಗಿಸಿರುವ ಕುಮಾರ್‌ ಅವರಿಗೆ ಹೈನುಗಾರಿಕೆಯಲ್ಲಿ ಪತ್ನಿ ಚಂದ್ರಿಕಾ ಹಾಗೂ ಇಬ್ಬರು ಪುತ್ರರು ಸಹಾಯ ಮಾಡುತ್ತಾರೆ. ಮನೆಯವರೆಲ್ಲರಿಗೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದೆ. ಹಸು ಸೆಗಣಿಯಿಂದ ಮನೆ ಬಳಕೆಗೆ ಬೇಕಾದ ಗೋಬರ್‌ ಗ್ಯಾಸ್‌ ಸಿಗುತ್ತದೆ. ಬಗ್ಗಡವನ್ನು ಕಾಫಿ ತೋಟ ಮತ್ತು ಕರಿಮೆಣಸು ಕೃಷಿ ಬಳಸುತ್ತಾರೆ. ಉಳಿದ ಸಗಣಿಯಿಂದ ಎರೆಗೊಬ್ಬರ ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದ್ದಾರೆ. ಈ ತಳಿಯ ಹಸುಗಳ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಹಸುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಒಂದು ಹಸುವಿಗೆ 1ಲಕ್ಷ ರು.ವರೆಗೆ ಬೆಲೆ ಇದೆ. ಹೀಗೆ ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ಕುಮಾರ್‌ ಅವರಿಗೆ ತಾಲೂಕು ಮಟ್ಟದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಸಂದಿದೆ. ರಾಜ್ಯ ಮಟ್ಟದ ಕೃಷಿಮೇಳದಲ್ಲಿ ಇವರು ಸಾಕಿರುವ ಗಿರ್‌ ತಳಿ ಹಸುವಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.

"

click me!