
ಬೆಂಗಳೂರು (ಜೂ.18) : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಮನ್ಸೂರ್ ಖಾನ್ ಪತ್ನಿಯ ಮನೆ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಚಿನ್ನಾಭರಣ ಹಾಗೂ ಕೆಲ ದಾಖಲೆ ಜಪ್ತಿ ಮಾಡಿದ್ದಾರೆ.
ಶಿವಾಜಿನಗರದ ಪಾರ್ಕ್ ಬಳಿಯಿರುವ ಮನ್ಸೂರ್ ಖಾನ್‌ನ ಪತ್ನಿ ಮನೆ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆದಿದೆ. ದಾಳಿ ವೇಳೆ ಮನೆಯಲ್ಲಿದ್ದ 2.5 ಲಕ್ಷ ರು. ನಗದು ಹಾಗೂ 2.5 ಕೆ.ಜಿ ಚಿನ್ನ ಪತ್ತೆಯಾಗಿದೆ. ಮನೆಯಲ್ಲಿದ್ದ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದೇವೆ. ಮನ್ಸೂರ್‌ಖಾನ್ ಜತೆ ಆತನ ಪತ್ನಿ ಮತ್ತು ಮಕ್ಕಳ ಪರಾರಿಯಾಗಿದ್ದು, ಮನೆಯಲ್ಲಿ ಸಂಬಂಧಿಕರು ಇದ್ದರು ಎಂದು ಎಸ್‌ಐಟಿ ಮೂಲಗಳು ತಿಳಿಸಿದೆ.
ಮತ್ತೊಂದೆಡೆ ಐಎಂಎ ಪ್ರಕರಣದಿಂದ ಹೂಡಿಕೆದಾರರು ಮಾತ್ರವಲ್ಲದೆ ಶಿಕ್ಷಕರು, ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಶಿಕ್ಷಕರು ವೇತನ ಸಮಸ್ಯೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಪಾಠಗಳು ನಡೆಯದೇ ತೊಂದರೆಗೀಡಾಗಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಪಾಲಕರು ಪಾಠಗಳನ್ನು ಸರಿಯಾಗಿ ನಡೆಸುವಂತೆ ಒತ್ತಾಯಿಸಿ ಶಾಲೆ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
ಐಎಂಎ ಸಂಸ್ಥೆ ದತ್ತು ತೆಗೆದುಕೊಂಡು ನಡೆಸುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಗೆ ವೇತನ ಸರಿಯಾಗಿ ಆಗಿಲ್ಲ. ಈ ಹಿನ್ನೆಲೆ ಶಿಕ್ಷಕರು ಶಾಲೆಗೆ ಬರುತ್ತಿಲ್ಲ. ಬಂದರೂ ವೇತನ ನೀಡಿಲ್ಲವೆಂದು ತರಗತಿಗಳಿಗೆ ಹಾಜರಾಗುತ್ತಿಲ್ಲ. ಹೀಗಾಗಿ ಮಕ್ಕಳು ಶಾಲೆಗೆ ಬಂದರೂ ಪಾಠಗಳು ನಡೆಯದೆ ವಿದ್ಯಾರ್ಥಿಗಳು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ಇಷ್ಟೆಲ್ಲ ಸಮಸ್ಯೆಯಾದರೂ, ಸ್ಥಳೀಯ ಜನಪ್ರತಿನಿಧಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.