ಮೋದಿ ಸರ್ಕಾರದಲ್ಲಿ ಎಲ್ಲವೂ ಸೋರಿಕೆ! : ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

By Suvarna Web DeskFirst Published Apr 4, 2018, 7:12 AM IST
Highlights

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗುತ್ತದೆ, ಚುನಾವಣಾ ಆಯೋಗದ ಮಾಹಿತಿಯೂ ಲೀಕ್‌ ಆಗುತ್ತದೆ. ಅಂದರೆ ಈ ಸರ್ಕಾರದ ಅವಧಿಯಲ್ಲಿ ಎಲ್ಲವೂ ‘ಲೀಕ್‌’ ಆಗುತ್ತದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗುತ್ತದೆ, ಚುನಾವಣಾ ಆಯೋಗದ ಮಾಹಿತಿಯೂ ಲೀಕ್‌ ಆಗುತ್ತದೆ. ಅಂದರೆ ಈ ಸರ್ಕಾರದ ಅವಧಿಯಲ್ಲಿ ಎಲ್ಲವೂ ‘ಲೀಕ್‌’ ಆಗುತ್ತದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆಯ ಪ್ರಯುಕ್ತ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಇತ್ತೀಚೆಗೆ ಸಿಬಿಎಸ್‌ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಕರ್ನಾಟಕದ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಮಾಧ್ಯಮಗಳಲ್ಲಿ ದಿನಾಂಕ ಘೋಷಣೆ ಆಗಿದ್ದನ್ನು ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ಮೋದಿ ಅವರು ಮಕ್ಕಳು ಪರೀಕ್ಷೆ ಹೇಗೆ ಎದುರಿಸಬೇಕೆಂಬ ಕುರಿತು ಪುಸ್ತಕವೊಂದನ್ನು ಬರೆದಿದ್ದಾರೆ. ಜತೆಗೆ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕೆಂಬ ಬಗ್ಗೆ ಎರಡು ಗಂಟೆ ಭಾಷಣವನ್ನೂ ಮಾಡಿದ್ದರು. ಮಕ್ಕಳು ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಪೋಷಕರ ಸಹಕಾರದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ, ಪರೀಕ್ಷೆ ಬರೆಯಲು ಹೋದಾಗ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿರುವ ಕಾರಣ ಪರೀಕ್ಷೆ ರದ್ದಾಗಿದೆ ಎಂದು ಹೇಳಲಾಯಿತು. ಈಗ ಲಕ್ಷಗಟ್ಟಲೆ ಮಕ್ಕಳು ಮತ್ತೆ ಪರೀಕ್ಷೆ ಬರೆಯಬೇಕಿದೆ. ಮೋದಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವಲ್ಲಿ ವಿಫಲವಾಗಿರಬಹುದು. ಆದರೆ, ಈಗ ಮತ್ತೆ ಮಕ್ಕಳು ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕು ಮತ್ತು ಪರೀಕ್ಷೆ ಸಮಯದಲ್ಲಿ ಏನೇನು ಮಾಡಬೇಕು, ಏನೇನು ಮಾಡಬಾರದು ಎಂಬ ಬಗ್ಗೆ ಮತ್ತೆ ಭಾಷಣ ಮಾಡಬಹುದು ಎಂದು ಮೋದಿ ಕಾಲೆಳೆದರು.

ಮೋದಿ ಪಕ್ಕದಲ್ಲೇ ಭ್ರಷ್ಟಾಚಾರಿಗಳು: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಹಾಗೆ ಮಾತನಾಡುವಾಗ ಅವರಿರುವ ವೇದಿಕೆಯಲ್ಲಿ ಯಾರಿದ್ದಾರೆ ಎಂಬುದನ್ನು ಗಮನಿಸುವುದಿಲ್ಲ. ಅವರ ಒಂದು ಪಕ್ಕದಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ, ನಾಲ್ಕೈದು ಮಾಜಿ ಸಚಿವರು ಇರುತ್ತಾರೆ. ಭ್ರಷ್ಟಾಚಾರಿಗಳು ಅವರ ಪಕ್ಕದಲ್ಲೇ ಇರುತ್ತಾರೆ. ಭ್ರಷ್ಚಾಚಾರದ ಬಗ್ಗೆ ಮಾತನಾಡುವಾಗಲಾದರೂ ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಎಂದು ರಾಹುಲ್‌ ಗಾಂಧಿ ಇದೇ ವೇಳೆ ಲೇವಡಿ ಮಾಡಿದರು.

ಭಾಷಣ ಮಾಡುವುದನ್ನಷ್ಟೇ ಕಲಿಸಿದೆ: ಮೋದಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌) ಬರೀ ಭಾಷಣ ಮಾಡುವುದನ್ನಷ್ಟೇ ಕಲಿಸಿದೆ. ಖಾಕಿ ಚಡ್ಡಿ ಹಾಕಿಕೊಂಡು, ಲಾಠಿ ಹಿಡಿದುಕೊಂಡು ಸುಳ್ಳುಗಳನ್ನು ಹೇಳುತ್ತಾ ಹೋಗು ಎಂದು ಪಾಠ ಮಾಡಿದೆ. ಆದರೆ, ಈ ದೇಶ ಸುಳ್ಳುಗಳಿಂದ ನಡೆಯುವುದಿಲ್ಲ. ದೇಶದ ಜನರಿಗೆ ಉದ್ಯೋಗ, ರೈತರ ಬೆಳೆಗೆ ಬೆಲೆ, ಎಲ್ಲರ ಖಾತೆಗೆ .15 ಲಕ್ಷ ಇನ್ನೂ ಬಂದಿಲ್ಲ ಎಂದ ಅವರು, ಚೀನಾ ದೇಶ ಡೋಕ್ಲಾಂನಲ್ಲಿ ರಸ್ತೆ-ಹೆಲಿಪ್ಯಾಡ್‌ ನಿರ್ಮಿಸುತ್ತಿದ್ದರೆ, ಮೋದಿ ಚೀನಾ ದೇಶದ ಅಧ್ಯಕ್ಷರನ್ನು ದೆಹಲಿಯಲ್ಲಿ ಉಯ್ಯಾಲೆಯಲ್ಲಿ ಕೂರಿಸಿ ತೂಗುತ್ತಿದ್ದರು ಎಂದು ಕಿಡಿಕಾರಿದರು.

ದಲಿತರ ಮೇಲೆ ದೌರ್ಜನ್ಯವಾದರೂ ಮೌನ

ದೇಶದಲ್ಲಿ ಹಗರಣಗಳು ನಡೆಯುತ್ತಿದ್ದರೆ ಪ್ರಧಾನಿ ಸುಮ್ಮನಿರುತ್ತಾರೆ. ಒಂದು ಶಬ್ದ ಕೂಡಾ ಮಾತನಾಡುವುದಿಲ್ಲ. ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ ಪುತ್ರ .50 ಸಾವಿರ ಬಂಡವಾಳ ಹೂಡಿ 3 ತಿಂಗಳಲ್ಲಿ ಕೋಟಿಗಟ್ಟಲೆ ಲಾಭ ಮಾಡಿದರೆ ಸುಮ್ಮನಿರುತ್ತಾರೆæ. ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣದ ಬಗ್ಗೆ ಮಾತನಾಡುವುದಿಲ್ಲ. ಹೈದರಾಬಾದ್‌ನಲ್ಲಿ ವೇಮುಲಾ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ದಲಿತರು, ಆದಿವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೆ ಕೇಂದ್ರ ಸರ್ಕಾರ ಕೈಚೆಲ್ಲಿ ಕುಳಿತಿದೆ. ಈಗ ಎಸ್ಸಿ,ಎಸ್ಟಿಕಾಯ್ದೆ ಬಗ್ಗೆ ವಿವಾದ ಎದ್ದಾಗಲೂ ಸುಮ್ಮನಿದ್ದಾರೆ ಎಂದು ಆರೋಪಿಸಿದರು.

click me!