ಸಾಲಮನ್ನಾ: ಪ್ರಧಾನಿ ಮೋದಿ ಟೀಕೆಗೆ ಮೊದಲ ಬಾರಿ ರಾಹುಲ್ ತಿರುಗೇಟು!

By Web DeskFirst Published Nov 30, 2018, 8:27 AM IST
Highlights

ಕಾಂಗ್ರೆಸ್ ಅಧಿಕಾರ ಇರುವ ಕರ್ನಾಟಕ ಹಾಗೂ ಪಂಜಾಬ್‌ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಬಾರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ.

ಹೈದ್ರಾಬಾದ್‌[ನ.30]: ಕರ್ನಾಟಕ ಮತ್ತು ಪಂಜಾಬ್‌ ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಟೀಕೆಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ. ಎರಡೂ ರಾಜ್ಯಗಳಲ್ಲಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ ದೇಶದ ಎಲ್ಲಾ ಜನರ ಖಾತೆಗೆ ತಲಾ 15 ಲಕ್ಷ ರು. ಹಾಕುವ ಪ್ರಧಾನಿ ಭರವಸೆ ಏನಾಯಿತು ಎಂದು ರಾಹುಲ್‌ ಕಟಕಿಯಾಡಿದ್ದಾರೆ.

ಗುರುವಾರ ತೆಲಂಗಾಣದಲ್ಲಿ ಪಕ್ಷದ ಪರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ದೇಶದ ಪ್ರತಿ ಜನರ ಬ್ಯಾಂಕ್‌ ಖಾತೆಗೆ 15 ಲಕ್ಷ ರು. ಹಾಕುವುದಾಗಿ ಪ್ರಧಾನಿ ಭರವಸೆ ನೀಡಿದ್ದರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಸಾಲ ಮನ್ನಾ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮಾಡುವ ಭರವಸೆ ನೀಡಿದ್ದರು. ಅಷ್ಟೇ ಏಕೆ, ನಾನು ಪ್ರಧಾನಿಯಾಗಿರುವುದಿಲ್ಲ, ಈ ದೇಶದ ನಿಷ್ಠಾವಂತ ಸೇವಕನಾಗಿರುತ್ತೇನೆ ಎಂದೆಲ್ಲಾ ಭರವಸೆ ನೀಡಿದ್ದರು. ಆದರೆ ಒಂದೇ ಒಂದು ಭರವಸೆಯನ್ನು ಈಡೇರಿಸಲೂ ಅವರು ವಿಫಲರಾಗಿದ್ದಾರೆ’ ಎಂದು ಟೀಕಿಸಿದರು.

ರೈತರ ಸಾಲ ಮನ್ನಾ ಮಾಡಲಾಗದ ಪ್ರಧಾನಿ ಮೋದಿ, ರಫೇಲ್‌ ಕೇಸಲ್ಲಿ ಅನಿಲ್‌ ಅಂಬಾನಿಗೆ 30000 ಕೋಟಿ ರು. ನೀಡಿದರು. ದೇಶದ 15 ಶ್ರೀಮಂತರ 3 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಲು ಸಾಧ್ಯ ಎಂದಾದಲ್ಲಿ ರೈತರ ಸಾಲ ಮನ್ನಾ ಮಾಡಲೂ ಪ್ರಧಾನಿ ಮುಂದಾಗಬೇಕು ಎಂದು ಆಗ್ರಹಿಸಿದರು. ಜೊತೆಗೆ ಕಳೆದ 15 ವರ್ಷಗಳಲ್ಲಿ ಮೋದಿ ಅವರು ನೀಡಿದ್ದ ಎಲ್ಲಾ ಭರವಸೆಗಳನ್ನು ಹುಡುಕಿ ನೋಡಿ, ಅವರು ತಮ್ಮ ಪ್ರತಿಯೊಂದು ಭರವಸೆ ಈಡೇರಿಸಲೂ ವಿಫಲವಾಗಿದ್ದು ಕಾಣುತ್ತದೆ ಎಂದು ಟೀಕಿಸಿದರು.

ಇದೇ ವೇಳೆ ‘ನಮ್ಮ ಜನರ ಮುಂದೆ ಸುಳ್ಳು ಹೇಳುವ ರೂಢಿ ನನಗಿಲ್ಲ. ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ನಾವು ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ಭರವಸೆ ನೀಡಿದ್ದೆವು. ಅದರಂತೆ ಅಧಿಕಾರಕ್ಕೆ ಬರುತ್ತಲೇ ಎರಡೂ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಮೂಲಕ ನಮ್ಮ ಮಾತು ಉಳಿಸಿಕೊಂಡಿದ್ದೇವೆ’ ಎಂದು ರಾಹುಲ್‌ ಹೇಳಿದರು. ಈ ಮೂಲಕ ರೈತರ ಸಾಲ ಮನ್ನಾ ವಿಷಯದಲ್ಲಿ ಕರ್ನಾಟಕ ಮತ್ತು ಪಂಜಾಬ್‌ ಸರ್ಕಾರ ವಿಫಲವಾಗಿದೆ ಎಂಬ ಇತ್ತೀಚಿನ ಚುನಾವಣಾ ಭಾಷಣಗಳಲ್ಲಿ ಪ್ರಧಾನಿ ಮೋದಿ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡುವ ಯತ್ನ ಮಾಡಿದರು.

click me!