
ಶ್ರೀನಗರ(ನ.29): ಕಾಶ್ಮೀರದ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ಪ್ರಮುಖ ರೂವಾರಿ, ‘ಮೋಸ್ಟ್ ವಾಂಟೆಡ್ ಭಯೋತ್ಪಾದಕ’ ನವೀದ್ ಜಟ್ ಬುಧವಾರ ಬದ್ಗಾಮ್‌ನಲ್ಲಿ ಯೋಧರ ಜತೆಗಿನ ಗುಂಡಿನ ಚಕಮಕಿ ವೇಳೆ ಹತನಾಗಿದ್ದಾನೆ.
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಗೆ ಕಾಶ್ಮೀರದಲ್ಲಿ ಮುಖ್ಯ ಕಮಾಂಡರ್ ಕೂಡ ಆಗಿರುವ ಜಟ್ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ಯೋಧರು ಗಾಯಗೊಂಡಿದ್ದಾರೆ. ಒಟ್ಟಾರೆ ಜಟ್ ವಿರುದ್ಧ ನಡೆದ ಕಾರ್ಯಾಚರಣೆ ಭದ್ರತಾ ಪಡೆಗಳಿಗೆ ಸಿಕ್ಕ ಯಶಸ್ಸು ಎಂದು ಬಣ್ಣಿಸಲಾಗುತ್ತಿದೆ.
ಶ್ರೀನಗರ ಜೈಲಿನಲ್ಲಿದ್ದ ಜಟ್ ಕಳೆದ ಫೆಬ್ರವರಿಯಲ್ಲಿ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ ಪರಾರಿಯಾಗಿದ್ದ. ಆ ನಂತರ ಆತನ ಸುಳಿವೇ ಲಭ್ಯವಾಗಿರಲಿಲ್ಲ. ಈ ನಡುವೆ, ಜೂನ್‌ನಲ್ಲಿ ನಡೆದ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣದಲ್ಲಿ ಆತನ ಪಾತ್ರದ ಕುರಿತು ಮಾಹಿತಿ ಬಂದಿತ್ತು. ಈತ ಬಡಗಾಮ್‌ನಲ್ಲಿ ಅಡಗಿರುವ ಕುರಿತು ಖಚಿತ ವರ್ತಮಾನ ದೊರೆಯುತ್ತಿದ್ದಂತೆ ಯೋಧರು ಮಂಗಳವಾರ ರಾತ್ರಿ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಆತ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ. ಸೈನಿಕರು ಪ್ರತಿದಾಳಿ ನಡೆಸಿದಾಗ ಹತನಾದ. ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮುಗಿಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಜಟ್ ಜತೆಗೆ ಆತನ ಸಹಚರನೂ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದಾನೆ.
ಕಾರ್ಯಾಚರಣೆ ಸಂದರ್ಭದಲ್ಲಿ ಬಡಗಾಮ್‌ನಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಜೂ.24ರಂದು ಬುಖಾರಿ ಅವರನ್ನು ಬೈಕ್‌ನಲ್ಲಿ ಬಂದ ಮೂವರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಮೂವರಲ್ಲಿ ಜಟ್ ಕೂಡ ಒಬ್ಬ ಎಂಬುದು ಪೊಲೀಸರ ಶಂಕೆ.
26/11 ದಾಳಿಕೋರ ಕಸಬ್ ಜತೆ ತರಬೇತಿ ಪಡೆದಿದ್ದ
ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಲಷ್ಕರ್ ಎ ತೊಯ್ಬಾ ಸಂಘಟನೆ ಭಯೋತ್ಪಾದಕ ನವೀದ್ ಜಟ್, ಮುಂಬೈ ಮೇಲಿನ ದಾಳಿ ಪ್ರಕರಣದಲ್ಲಿ ನೇಣಿಗೇರಿದ ಅಜ್ಮಲ್ ಕಸಬ್ ಜತೆಗೇ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಎನ್ನಲಾಗಿದೆ.
ಕಸಬ್ ಹಾಗೂ ಜಟ್‌ಗೆ ಒಂದೇ ಶಿಬಿರದಲ್ಲಿ ಲಷ್ಕರ್ ಸಂಘಟನೆ ಕಠಿಣ ತರಬೇತಿ ನೀಡಿತ್ತು. 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಲು ಕಸಬ್ ಭಾರತ ಪ್ರವೇಶಿಸಿದ್ದರೆ, 2012ರಲ್ಲಿ ಜಟ್ ಗಡಿ ದಾಟಿ ಬಂದಿದ್ದ. ಕಳೆದ ಫೆಬ್ರವರಿಯಲ್ಲಿ ಶ್ರೀನಗರ ಜೈಲಿನಲ್ಲಿದ್ದ ಈತನನ್ನು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ ಗುಂಡಿನ ಚಕಮಕಿ ನಡೆದಿತ್ತು. ಆಗ ಆತ ಪರಾರಿಯಾಗಿದ್ದ. ಈ ಕುರಿತ ವಿಡಿಯೋ ವೈರಲ್ ಆಗಿತ್ತು.
5 ಅಡಿ ಎತ್ತರವಿರುವ ಜಟ್, ಭದ್ರತಾ ಪಡೆಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುವುದರಲ್ಲಿ ನಿಸ್ಸೀಮ. ಕನಿಷ್ಠ ಆರು ಬಾರಿ ಆತ ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.