
ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ್ದ ವಿಮಾನ ಕೇವಲ 20 ಸೆಕೆಂಡ್‌ಗಳ ಅಂತರದಿಂದ ಪತನಗೊಳ್ಳುವುದರಿಂದ ಪಾರಾಗಿದೆ ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ. ರಾಹುಲ್ ಗಾಂಧಿ ಅವರು ಏಪ್ರಿಲ್ 26ರಂದು ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಬಾಡಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ರಾಹುಲ್ ಗಾಂಧಿ ಅವರು ಅಪಾಯದಿಂದ ಪಾರಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಇಬ್ಬರು ಸದಸ್ಯರ ಸಮಿತಿಯಿಂದ ತನಿಖೆಗೆ ಆದೇಶಿಸಿತ್ತು. ಹಾರಾಟದ ವೇಳೆ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷಕ್ಕೆ ಕಾರಣಗಳೇನು ಎಂಬ ಸಂಗತಿ ಇದೀಗ ಲಭ್ಯವಾಗಿದೆ. ‘ಟೈಮ್ಸ್ ನೌ’ ಸುದ್ದಿವಾಹಿನಿ ಜು.12ರಂದು ಆರ್‌ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಡಿಜಿಸಿಎ ಈ ಅಚ್ಚರಿಯ ಸಂಗತಿಯನ್ನು ತಿಳಿಸಿದೆ. ಈ ವಿವರಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿವೆ.
ಈ ವರದಿಯ ಪ್ರಕಾರ, ವಿಮಾನವು ಆಟೋ ಪೈಲಟ್ ಮೋಡ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರ ‘ಅರಿವಿಲ್ಲದ’ ಸಿಬ್ಬಂದಿ ವಿಮಾನವನ್ನು ನಿಯಂತ್ರಣಕ್ಕೆ ತರಲು ಸ್ವಲ್ಪ ಸಮಯ ತೆಗೆದುಕೊಂಡದರು. ಒಂದು ವೇಳೆ ವಿಮಾನದ ಸಿಬ್ಬಂದಿ ತಾಂತ್ರಿಕ ದೋಷವನ್ನು ಪತ್ತೆ ಮಾಡಿ ಅದನ್ನು ಸರಿಪಡಿಸಲು 20 ಸೆಕೆಂಡ್ ವಿಳಂಬ ಮಾಡಿದ್ದರೂ ವಿಮಾನ ಪತನಗೊಳ್ಳುತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆರ್‌ಟಿಐಗೆ ಸರ್ಕಾರ ಉತ್ತರ ನೀಡಲು 49 ದಿನ ವಿಳಂಬ ಮಾಡಿದ್ದರೂ, ಡಿಜಿಸಿಎ ವರದಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ.
ಕಾಂಗ್ರೆಸ್ ತರಾಟೆ: ಇದೇ ವೇಳೆ, ಡಿಜಿಸಿಎ ತನಿಖಾ ವರದಿಯನ್ನು ಪ್ರಕಟಿಸಲು ವಿಳಂಬ ಮಾಡಿದ್ದಕ್ಕೆ ಎನ್‌ಡಿಎ ಸರ್ಕಾರವನ್ನು ಕಾಂಗ್ರೆಸ್ ತರಾಟೆ ತೆಗೆದುಕೊಂಡಿದೆ. ವರದಿಯ ವಿಳಂಬ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ತಕ್ಷಣವೇ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕರ್ನಾಟಕ ಪ್ರಚಾರಕ್ಕೆ ಆಗಮಿಸುವಾಗ ಘಟನೆ
ಏ.26ರಂದು ಉತ್ತರ ಕನ್ನಡ ಜಿಲ್ಲೆಗೆ ಪ್ರಚಾರ ಮಾಡಲು ರಾಹುಲ್ ತೆರಳಬೇಕಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ‘ವಿಟಿ ಎವಿಎಚ್’ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದರು. ವಿಮಾನದಲ್ಲಿ ರಾಹುಲ್ ಗಾಂಧಿ, ದೂರುದಾರರಾದ ವಿದ್ಯಾರ್ಥಿ, ಭದ್ರತಾ ಸಿಬ್ಬಂದಿ ಸೇರಿದಂತೆ 5 ಜನರು ಇದ್ದರು. ರಾಹುಲ್ ಬೆಳಗ್ಗೆ 9.15ಕ್ಕೆ ವಿಮಾನದ ಮೂಲಕ ದೆಹಲಿ ಬಿಟ್ಟಿದ್ದರು. 11.45ಕ್ಕೆ ಹುಬ್ಬಳ್ಳಿ ತಲುಪಬೇಕಿತ್ತು. ಆದರೆ 10.45ರ ಸುಮಾರಿಗೆ ವಿಮಾನ ಎಡಭಾಗದತ್ತ ವಾಲಲು ಆರಂಭಿಸಿತು. 8 ಸಾವಿರ ಅಡಿಯಷ್ಟುಮೇಲಿದ್ದ ವಿಮಾನವು ಎತ್ತರದಿಂದ ಕೆಳಗೆ ಇದ್ದಕ್ಕಿದ್ದಂತೆ ಕುಸಿದು, ಅಲುಗಾಡಿತು. ಗಮನಿಸಿದಾಗ ವಿಮಾನದ ಆಟೋ ಪೈಲಟ್ ವಿಧಾನವು ಕೆಲಸ ಮಾಡುತ್ತಿರಲಿಲ್ಲ ಎಂದು ತಿಳಿದುಬಂತು. ಈ ವೇಳೆ, ಹುಬ್ಬಳ್ಳಿಯಲ್ಲಿ ಮೊದಲು 2 ಬಾರಿ ವಿಮಾನವನ್ನು ಇಳಿಸಲು ಪ್ರಯತ್ನಿಸಿ ಸಾಧ್ಯವಾಗದೆ ಕೊನೆಗೆ ಮೂರನೇ ಬಾರಿ ವಿಮಾನವು ಲ್ಯಾಂಡ್ ಆಯಿತು. ಅಲುಗಾಡುತ್ತ ಹಾಗೂ ವಿಚಿತ್ರ ಶಬ್ದ ಮಾಡುತ್ತ 11.25ಕ್ಕೆ ಭೂಸ್ಪರ್ಶ ಮಾಡಿತು.
ವರದಿಯಲ್ಲೇನಿದೆ?
1. ಆಕಾಶದಲ್ಲಿ ಇದ್ದಕ್ಕಿದ್ದಂತೆ ಒಂದು ಬದಿಗೆ ಅತಿಯಾಗಿ ವಾಲಿದ ರಾಹುಲ್ ಇದ್ದ ವಿಮಾನ
2. ತಾಂತ್ರಿಕ ದೋಷದಿಂದಾಗಿ ವಾಲಿದ ವಿಮಾನ, ಇದರಿಂದಾಗಿ ಪತನವಾಗುವ ಸಾಧ್ಯತೆ ಇತ್ತು
3. ವಿಮಾನದಲ್ಲಿ ದೋಷ ಕಾಣಿಸಿಕೊಂಡ ವೇಳೆ ಅದು ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಇತ್ತು
4. ತಕ್ಷಣವೇ ಪೈಲಟ್‌ಗಳು ವಿಮಾನವನ್ನು ತಾವೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿತ್ತು
5. ಆದರೆ, ಪೈಲಟ್‌ಗಳು ವಿಮಾನದ ಸಮತೋಲನ ಕಾಪಾಡಲು ತುಸು ವಿಳಂಬ ಮಾಡಿದರು
6. ಇನ್ನು 20 ಸೆಕೆಂಡ್ ವಿಳಂಬವಾಗಿದ್ದರೂ ವಿಮಾನ ಪತನಗೊಳ್ಳುವ ಸಕಲ ಸಾಧ್ಯತೆಗಳಿದ್ದವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.