ಫ್ಲೈಟ್ ಹತ್ತಿದ್ರು, ಕಾರ್ ಏರಿದ್ರು, ಬೈಕ್ ಸವಾರಿ ಮಾಡಿದ್ರು, ನಡೆದೂ ಹೋದ್ರು.. ಕೊನೆಗೆ ರಾಹುಲ್ ಅರೆಸ್ಟ್ ಆದ್ರು

By Suvarna Web DeskFirst Published Jun 8, 2017, 5:01 PM IST
Highlights

ರಾಷ್ಟ್ರೀಯ ಪಕ್ಷದ ಮುಖಂಡನಾಗಿದ್ದರೂ ರಾಹುಲ್ ಗಾಂಧಿ ಸಣ್ಣ ಹುಡುಗನಂತೆ ವರ್ತಿಸಿದ್ದಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ದಾರೆ. "ರಾಹುಲ್ ಗಾಂಧಿ ಎಲ್ಲಾ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕಾಲೇಜು ವಿದ್ಯಾರ್ಥಿಯಂತೆ ಹೆಲ್ಮೆಟ್ ಇಲ್ಲದೆಯೇ ಅವರು ಬೈಕ್ ಚಲಾಯಿಸಿದ್ದಾರೆ. ಇದು ತಪ್ಪು" ಎಂದು ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಜೂನ್ 08): ಮಂಡಸೌರ್'ಗೆ ಹೋಗಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂಬ ರಾಹುಲ್ ಗಾಂಧಿ ಪ್ರಯತ್ನ ಫಲಪ್ರದವಾಗಲಿಲ್ಲ. ರಾಜಸ್ಥಾನ-ಮಧ್ಯಪ್ರದೇಶದ ಗಡಿಭಾಗದಲ್ಲಿ ಪೊಲೀಸರು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ಸಿಗರನ್ನು ಬಂಧಿಸಿದ್ದಾರೆ. ಆದರೆ, ಬಂಧನಕ್ಕೆ ಮುನ್ನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅನೇಕ ರೋಚಕ ಕ್ಷಣಗಳನ್ನ ಅನುಭವಿಸಿದ್ದಂತೂ ಹೌದು.

ಹೇಗಿತ್ತು ರಾಹುಲ್ ಪ್ರಯಾಣ?
ಮಧ್ಯಪ್ರದೇಶದ ಮಂದಸೋರ್ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ರೈತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರ ಗೋಲಿಬಾರ್'ಗೆ ಹಲವು ರೈತರು ಬಲಿಯಾದ ನಂತರ ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಡೆದಿದೆ. ನಿಮೋಡಾ ಗ್ರಾಮದಲ್ಲಿ ನಡೆಸಲಾಗುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ನಿರ್ಧರಿಸುತ್ತಾರೆ.

ಇಂದು ಗುರುವಾರ ಬೆಳಗ್ಗೆ 10:30ಕ್ಕೆ ರಾಹುಲ್ ಗಾಂಧಿ ವಿಮಾನದ ಮೂಲಕ ರಾಜಸ್ಥಾನದ ಉದಯಪುರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಅಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರ ಸೆಲ್ಫಿ ಹುಚ್ಚಿಗೆ ಸ್ವಲ್ಪ ತಲೆಬಾಗುತ್ತಾರೆ. ಹಾಗೂ ಹೀಗೂ ನೂಕಾಡಿ ಪೊಲೀಸರ ಸಹಾಯದಿಂದಲೇ ರಾಹುಲ್ ಗಾಂಧಿ ತಮ್ಮ ಕಾರನ್ನೇರಿ ಮಧ್ಯಪ್ರದೇಶದ ಮಂದಸೋರ್'ನತ್ತ ಪ್ರಯಾಣ ಬೆಳೆಸುತ್ತಾರೆ.

ಮಧ್ಯಪ್ರದೇಶ ಗಡಿ ಬರುತ್ತಿದ್ದಂತೆಯೇ ತಮ್ಮನ್ನು ಬಂಧಿಸುವುದು ಖಚಿತ ಎಂಬುದು ರಾಹುಲ್ ಗಾಂಧಿಗೆ ತಿಳಿಯುತ್ತದೆ. ಗಡಿಗೆ ಕೆಲ ಕಿಮೀ ಮುಂದೆಯೇ ರಾಹುಲ್ ತಮ್ಮ ಬೊಲೇರೋ ಕಾರಿನಿಂದ ಕೆಳಗಿಳಿದು ಮೋಟಾರ್ ಸೈಕಲ್ ಏರುತ್ತಾರೆ. ಗಡಿಯಲ್ಲಿರುವ ಪೊಲೀಸ್ ಚೆಕ್'ಪೋಸ್ಟ್'ಗಳನ್ನು ತಪ್ಪಿಸಲು ರಾಹುಲ್ ಈ ತಂತ್ರ ಅನುಸರಿಸುತ್ತಾರೆ.

ಹಾಗೂಹೀಗೂ ನಿಮೋಡಾದ ಗಡಿ ಸಮೀಪ ಬರುತ್ತಾರೆ. ಆದರೆ, 500 ಮೀಟರ್ ಹಿಂದೆಯೇ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿರುತ್ತಾರೆ. ಬ್ಯಾರಿಕೇಡ್ ನೋಡುತ್ತಿದ್ದಂತೆಯೇ ಬೈಕ್'ನ್ನು ಅಲ್ಲೇ ಬಿಟ್ಟು ನಡೆದುಕೊಂಡೇ ಚೆಕ್'ಪೋಸ್ಟ್ ತಲುಪುತ್ತಾರೆ. ಪೊಲೀಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿರುವಂತೆಯೇ ರಾಹುಲ್ ಗಾಂಧಿ ಬ್ಯಾರಿಕೇಡ್ ಜಿಗಿದು ಆಚೆ ಹೋಗುತ್ತಾರೆ. ಅಲ್ಲಿಂದ 50 ಮೀಟರ್ ದೂರ ಹೋಗಿಲ್ಲ, ಪೊಲೀಸರು ಧಾವಿಸಿ ಬಂಧಿಸುತ್ತಾರೆ. ರಾಹುಲಲ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಸ್ಸಿನಲ್ಲಿ ಏರಿಸಿಕೊಂಡು ನೀಮುಚ್'ನಲ್ಲಿರುವ ಗೆಸ್ಟ್ ಹೌಸ್'ನಲ್ಲಿ ಗೃಹ ಬಂಧನದಲ್ಲಿಟ್ಟಿದ್ದಾರೆ.

ರಾಹುಲ್ ಸಣ್ಣವನಂತೆ ವರ್ತಿಸಿದ್ರು ಎಂದ ಸರಕಾರ:
ರಾಷ್ಟ್ರೀಯ ಪಕ್ಷದ ಮುಖಂಡನಾಗಿದ್ದರೂ ರಾಹುಲ್ ಗಾಂಧಿ ಸಣ್ಣ ಹುಡುಗನಂತೆ ವರ್ತಿಸಿದ್ದಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ದಾರೆ. "ರಾಹುಲ್ ಗಾಂಧಿ ಎಲ್ಲಾ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕಾಲೇಜು ವಿದ್ಯಾರ್ಥಿಯಂತೆ ಹೆಲ್ಮೆಟ್ ಇಲ್ಲದೆಯೇ ಅವರು ಬೈಕ್ ಚಲಾಯಿಸಿದ್ದಾರೆ. ಇದು ತಪ್ಪು" ಎಂದು ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಕೊಡ್ತಾರೆ ಗೋಲಿ:
ಇದೇ ವೇಳೆ, ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಗಣ್ಯ ವ್ಯಕ್ತಿಗಳ ಸಾಲ ಮನ್ನಾ ಮಾಡುವ ಮೋದಿಗೆ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ. ರೈತರಿಗೆ ಗೋಲಿ ಕೊಡುವುದಷ್ಟೇ ಮೋದಿಗೆ ಗೊತ್ತು," ಎಂದು ರಾಹುಲ್ ವಾಬ್ದಾಳಿ ನಡೆಸಿದ್ದಾರೆ.

click me!