ಕೈ ಕಚೇರಿ ಪಕ್ಕದಲ್ಲಿ ರಫೆಲ್ ಮಾದರಿ: ಕಣ್ಬಿಟ್ಟು ನೋಡಿದರು ಬಾರಿ ಬಾರಿ!

By Web DeskFirst Published May 31, 2019, 3:12 PM IST
Highlights

ಚೌಕಿದಾರ್ ಚೋರ್ ಹೈ ಎಂದ ಕಾಂಗ್ರೆಸ್‌ಗೆ ರಫೆಲ್ ಮುಜುಗರ| ಕಾಂಗ್ರೆಸ್ ಪ್ರಧಾನ ಕಚೇರಿ ಪಕ್ಕದಲ್ಲೇ ರಫೆಲ್ ಮಾದರಿ| ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅಧಿಕೃತ ನಿವಾಸದ ಮುಂಭಾಗದಲ್ಲಿ ರಫೆಲ್ ಮಾದರಿ| ಕಾಂಗ್ರೆಸ್ ಪ್ರಧಾನ ಕಚೇರಿ ಪಕ್ಕದಲ್ಲಿ ವಾಯುಸೇನೆ ಮುಖ್ಯಸ್ಥರ ಅಧಿಕೃತ ನಿವಾಸ| ನವದೆಹಲಿಯ ಅಕ್ಬರ್ ರೋಡ್‌ನಲ್ಲಿರುವ ಧನೋವಾ ನಿವಾಸ|

ನವದೆಹಲಿ(ಮೇ.31): ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವ ಪ್ರಸಂಗವೊಂದು ನಡೆದಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಪಕ್ಕದಲ್ಲೇ ರಫೆಲ್ ಯುದ್ಧ ವಿಮಾನದ ಮಾದರಿಯೊಂದನ್ನು ನಿಲ್ಲಿಸಲಾಗಿದೆ.

ನವದೆಹಲಿಯಲ್ಲಿರುವ ವಾಯುಸೇನೆ ಮುಖ್ಯಸ್ಥರ ಅಧಿಕೃತ ನಿವಾಸದ ಎದುರು ರಫೆಲ್ ಯುದ್ಧ ವಿಮಾನದ ಮಾದರಿಯನ್ನು ನಿಲ್ಲಿಸಲಾಗಿದೆ. ಅಕ್ಬರ್ ರೋಡ್‌ನಲ್ಲಿರುವ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರ ಅಧಿಕೃತ ನಿವಾಸದ ಪಕ್ಕದಲ್ಲೇ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಇದೆ.

ರಫೆಲ್ ಯುದ್ಧ ವಿಮಾನವನ್ನು ವಾಯುಸೇನೆಯ ಗೋಲ್ಡನ್ ಆ್ಯರೋಸ್ 17 ಸ್ಕ್ವಾರ್ಡನ್‌ಗೆ ಹಸ್ತಾಂತರಿಸಲಿದ್ದು, ಕಾರ್ಗಿಲ್ ಯುದ್ಧದ ಸಮುಯದಲ್ಲಿ ಈ ವಿಭಾಗವನ್ನು ಬಿಎಸ್ ಧನೋವಾ ಮುನ್ನಡೆಸಿದ್ದರು. ಈ ಕಾರಣಕ್ಕೆ ಧನೋವಾ ಅವರ ಅಧಿಕೃತ ನಿವಾಸದ ಮುಂದೆ ರಫೆಲ್ ಯುದ್ಧ ವಿಮಾನದ ಮಾದರಿಯನ್ನು ನಿಲ್ಲಿಸಲಾಗಿದೆ ಎನ್ನಲಾಗಿದೆ.

Replica of Rafale jet erected outside Air Chief Marshal BS Dhanoa’s residence in Delhi. His residence is next to Congress Headquarters. pic.twitter.com/Icoo63G2At

— ANI (@ANI)

ಇದೇ ಸೆಪ್ಟೆಂಬರ್‌ನಲ್ಲಿ ರಫೆಲ್ ನ ಮೊದಲ ಹಂತದ ಯುದ್ಧ ವಿಮಾನಗಳನ್ನು ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಸಲಿದ್ದು, ಪರೀಕ್ಷಾರ್ಥ ಪ್ರಯೋಗ ಹಾರಾಟದ ಬಳಿಕ ಮೇ, 2020ರಲ್ಲಿ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಎಂಬ ಪದ ಬಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!