ಬೆಂಗಳೂರಲ್ಲಿ ಇಂದು ರಾಹುಲ್‌ ರಫೇಲ್‌ ಸಂವಾದ!

By Web DeskFirst Published Oct 13, 2018, 10:55 AM IST
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ರಫೇಲ್ ಡೀಲ್ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಬ್ಬನ್ ಪಾರ್ಕ್ ಬಳಿ ಇರುವ HAL ಕಚೇರಿಯಲ್ಲಿ ಉದ್ಯೋಗಿಗಳ ಜೊತೆಗೂ ಮಾತುಕತೆ ನಡೆಸಲಿದ್ದಾರೆ. ಇಲ್ಲಿದೆ ರಾಹುಲ್ ಗಾಂಧಿ ಸಂವಾದ ಡೀಟೇಲ್ಸ್.

ಬೆಂಗಳೂರು(ಅ.13):  ಎಚ್‌ಎಎಲ್‌ಗೆ ನೀಡಿದ್ದ ರಫೇಲ್‌ ಯುದ್ಧ ವಿಮಾನದ ಗುತ್ತಿಗೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಎಚ್‌ಎಎಲ್‌ ನಿವೃತ್ತ ಹಾಗೂ ಹಾಲಿ ಸಿಬ್ಬಂದಿ​ಗಳು ಸೇರಿ​ದಂತೆ ವಿವಿಧ ಕ್ಷೇತ್ರ​ಗಳ ಗಣ್ಯ​ರೊಂದಿಗೆ ಸಂವಾದ ನಡೆಸಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ಕಬ್ಬನ್‌ ಪಾರ್ಕ್ ಬಳಿಯ ಎಚ್‌ಎಎಲ್‌ ಕಚೇರಿ ಎದುರಿನ ಮ್ಯಾಡಿನ್ಸನ್ ಸ್ಕ್ವಾರ್ ಬಳಿ ಸಭೆ ನಡೆಯಲಿದೆ. ಈ ವೇಳೆ ಎಚ್‌ಎಎಲ್‌ ನಿವೃತ್ತ ಉದ್ಯೋಗಿಗಳೊಂದಿಗೆ ರಫೇಲ್‌ ಯುದ್ಧ ವಿಮಾನ ಟೆಂಡರ್‌ ತಪ್ಪಿದ್ದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ದೆಹಲಿಗೆ ವಾಪಸಾಗಲಿದ್ದಾರೆ.

ಈ ಬಗ್ಗೆ ಎಚ್‌ಎಎಲ್‌ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಅವರೊಂದಿಗೆ ಶುಕ್ರ​ವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌, ಸಂವಾದದಲ್ಲಿ ರಾಹುಲ್‌ ಗಾಂಧಿ ಎಚ್‌ಎಎಲ್‌ ಕೊಡುಗೆಗಳ ಬಗ್ಗೆ ಮಾತನಾಡಲಿದ್ದಾರೆ. ಎಚ್‌ಎಎಲ್‌ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೂ ಲಾಭದಲ್ಲೇ ಇದೆ. ಇಂತಹ ಸಂಸ್ಥೆಗೆ ಗುತ್ತಿಗೆ ನೀಡದೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಸಂವಾದದಲ್ಲಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಎಂದರು.

ನ್ಯಾಯಕ್ಕಾಗಿ ವಿಪಕ್ಷದ ಮೊರೆ:
ಅನಂತ ಪದ್ಮನಾಭ ಅವರು ಮಾತನಾಡಿ, ಎಷ್ಟುಲಕ್ಷ ಕೋಟಿ ಕೊಟ್ಟರೂ ಇಂತಹ ಸಂಸ್ಥೆ ಕಟ್ಟಲು ಸಾಧ್ಯವಿಲ್ಲ. ಎಲ್ಲಾ ಯುದ್ಧ ವಿಮಾನಗಳನ್ನು ಎಚ್‌ಎಎಲ್‌ ನಿರ್ಮಾಣ ಮಾಡುತ್ತದೆ. ವಿಶ್ವದಲ್ಲಿ ಹೆಲಿಕಾಪ್ಟರ್‌ ನಿರ್ಮಾಣದಲ್ಲಿ 6ನೇ ಸ್ಥಾನದಲ್ಲಿದ್ದೇವೆ. ಏರೋಸ್ಪೇಸ್‌ನಲ್ಲಿ 4ನೇ ಸ್ಥಾನದಲ್ಲಿದ್ದೇವೆ. ನಮ್ಮ ರಕ್ಷಣಾ ಸಚಿವರಿಗೆ ಏನೇನೂ ಮಾಹಿತಿ ಇಲ್ಲ. ಆದರೂ ಇದೀಗ ಈ ಸಂಸ್ಥೆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ನಮ್ಮ ಸಂಸ್ಥೆಗೆ ಭೇಟಿ ನೀಡಿಲ್ಲ. ಇದೇ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಾರೆ ಆದರೆ ಸಂಸ್ಥೆಗೆ ಬರುವುದಿಲ್ಲ. ರಫೇಲ್‌ ಯುದ್ಧ ವಿಮಾನ ನಿರ್ಮಿಸುವ ಸಾಮರ್ಥ್ಯ ಎಚ್‌ಎಎಲ್‌ ಆಗಿದೆ. ಪ್ರಸ್ತುತ 30 ಸಾವಿರ ಸಿಬ್ಬಂದಿ ಎಚ್‌ಎಎಲ್‌ನಲ್ಲಿದ್ದು, ಈ ಗುತ್ತಿಗೆ ನೀಡಿದ್ದರೆ ಇನ್ನೂ 3 ಸಾವಿರ ಮಂದಿಗೆ ಉದ್ಯೋಗಾವಕಾಶ ದೊರೆಯುತ್ತಿತ್ತು. ಹೀಗಾಗಿ ಗುತ್ತಿಗೆ ನೀಡುವಂತೆ ಒತ್ತಾಯಿಸಿದರೂ ಕೇಂದ್ರ ಸರ್ಕಾರವು ಎಚ್‌ಎಎಲ್‌ಗೆ ನ್ಯಾಯ ಒದಗಿಸಿಲ್ಲ. ಯಾವುದೇ ಸಮಸ್ಯೆ ಬಂದರೂ ತಂದೆ, ತಾಯಿ ಬಳಿ ಅಥವಾ ಸರ್ಕಾರ, ವಿರೋಧಪಕ್ಷದ ಬಳಿ ಹೋಗಬೇಕು. ಸರ್ಕಾರ ಮಾತು ಕೇಳಲಿಲ್ಲ ಹೀಗಾಗಿ ವಿಪಕ್ಷ ಮುಖಂಡ ರಾಹುಲ್‌ ಮೊರೆ ಹೋಗಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿ ಬರುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.

click me!